ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ

87
firstsuddi

ಚಿಕ್ಕಮಗಳೂರು : ಹೃದಯಾಘಾತದಿಂದ ಬೆಳಿಗ್ಗೆ ನಿಧನರಾದ ಕನ್ನಡದ ಕಬೀರ, ತತ್ವಜ್ಞಾನಿ, ಪದ್ಮಶ್ರೀ ಪುರಸ್ಕೃತ ಸಾಹಿತಿ ಇಬ್ರಾಹಿಂ ಸುತಾರ ಅವರಿಗೆ ನಗರದ ಬಿಎಸ್‍ಪಿ ಕಛೇರಿಯಲ್ಲಿ ಶನಿವಾರ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.

ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದ ಕಛೇರಿಗೆ ಧಾವಿಸಿದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಮಾಜ ಸುಧಾರಕನ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಿದರು.

ಈ ವೇಳೆ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಇಬ್ರಾಹಿಂ ಸುತಾರ ಅವರು ಹುಟ್ಟಿನಿಂದ ಮುಸ್ಲಿಮರಾದರೂ ಎಲ್ಲಾ ಧರ್ಮಗಳೂ ಒಂದೇ ಎಂದು ಸಾರುವುದರ ಜೊತೆಗೆ ಭಾವೈಕ್ಯತೆಗಾಗಿ, ಸರ್ವಧರ್ಮ ಸಮನ್ವಯಕ್ಕಾಗಿ ಶ್ರಮಿಸಿದ ಸಮಾಜ ಸುಧಾರಕರು ಎಂದರು.

ಇಬ್ರಾಹಿಂ ಸುತಾರ ಅವರು ಸರ್ವಧರ್ಮ ಸಮನ್ವಯ ಸಾಹಿತಿಯಾಗಿ ಕನ್ನಡದ ಕಬೀರರಾಗಿ ಚಿಂತಕರಾಗಿ, ತತ್ವಜ್ಞಾನಿಯಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು, ತಮ್ಮ ಜೀವನದುದ್ದಕ್ಕೂ ಮಾನವೀಯತೆಯನ್ನು ಪ್ರತಿಪಾದಿಸುತ್ತಿದ್ದ ಅವರ ಸಾವಿನಿಂದ ಹಿಂದೂ ಮುಸ್ಲಿಂ ಸಮುದಾಯಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಹೇಳಿದರು.

ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ ಇಬ್ರಾಹಿಂ ಸುತಾರ ಅವರ ಪ್ರವಚನಗಳಿಂದ ಪ್ರಭಾವಿತರಾಗಿ ಸಾವಿರಾರು ಜನ ಬದಲಾಗಿದ್ದಾರೆ ಎಂದು ತಿಳಿಸಿದರು.

ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್ ಮಾತನಾಡಿ ಭಕ್ತಿ ಭಂಡಾರಿ ಬಸವಣ್ಣನವರ ವಚನಗಳನ್ನು ಇಬ್ರಾಹಿಂ ಸುತಾರ ಅವರು ನಿರರ್ಗಳವಾಗಿ ಹಾಡುತ್ತಿದ್ದರು ಎಂದರು.

ಜಿಲ್ಲಾ ಸಹೋದರತ್ವ ಸಮಿತಿಯ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಪಕ್ಷದ ಪದಾಧಿಕಾರಿಗಳಾದ ನವೀನ್, ರವಿಕುಮಾರ್, ಸೋಮಶೇಖರ್ ಹಾಜರಿದ್ದರು.