ಬಿಜೆಪಿ ಶಾಸಕನಿಗೆ ಮಹಿಳೆಯಿಂದ ಬ್ಲಾಕ್‍ಮೇಲ್ – ಕಾನೂನು ಹೋರಾಟಕ್ಕೆ ಸಿದ್ಧ ಎಂದ ತೇಲ್ಕೂರ್.

76
firstsuddi

ಕಲಬುರಗಿ : ಸೇಡಂ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಅವರಿಗೆ ಮಹಿಳೆಯೊಬ್ಬರು ಬ್ಲಾಕ್ ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶಾಸಕ ತೆಲ್ಕೂರ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ. ಸರ್ಕಾರ ಯಾವುದೇ ರೀತಿಯ ತನಿಖೆ ನಡೆಸಲಿ ನಾನು ಸಿದ್ಧನಿದ್ದೇನೆ. ತಪ್ಪಿತಸ್ಥರು ಯಾರೇ ಇದ್ರೂ ಕ್ರಮಕೈಗೊಳ್ಳಲಿ. ನಾನು ನಿರಂತರ ಬ್ಲಾಕ್ ಮೇಲ್ ಗೆ ಒಳಗಾಗಿದ್ದೇನೆ. ಈ ಬಗ್ಗೆ ನಾನು ಯಾರ ಮೇಲೂ ಆರೋಪವನ್ನು ಮಾಡುವುದಿಲ್ಲ ಎಂದರು.

ನಾನು ಈ ಕುರಿತು ಯಾವುದೇ ರೀತಿ ಮಾತನಾಡುವುದಿಲ್ಲ. ಪ್ರಸ್ತುತ ನಾನು ಎಫ್ ಐಆರ್ ದಾಖಲಿಸಿದ್ದೇನೆ. ಇನ್ನುಳಿದಂತೆ ಪೊಲೀಸರು ನೋಡಿಕೊಳ್ಳುತ್ತಾರೆ. ಪಕ್ಷ ನನಗೆ ತುಂಬಾ ಕೆಲಸವನ್ನು ಕೊಟ್ಟಿದೆ. ಜನರಿಗಾಗಿ ನಾನು ತುಂಬಾ ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ನಾನು ಯಾವುದೇ ರೀತಿ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಪಕ್ಷ ಮತ್ತು ಜನರು ನನಗೆ ಕೊಟ್ಟ ಅಧಿಕಾರವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ಮಹಿಳೆ ಆರೋಪವೇನು? : ಶಾಸಕರಿಂದ ನನಗೆ ಮೋಸ ಆಗಿದೆ. ಈ ಬಗ್ಗೆ ಕಳೆದ ಎರಡು ವರ್ಷದಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಬಿಜೆಪಿ ಶಾಸಕನಿಗೆ ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಆರೋಪಿಸಿದ್ದಾರೆ.

ವಕೀಲ ಜಗದೀಶ್ ಜೊತೆ ತನಗಾದ ಅನ್ಯಾಯದ ಬಗ್ಗೆ ವೀಡಿಯೋ ಕಾಲ್ ಮೂಲಕ ವಿವರಿಸಿರುವ ಮಹಿಳೆ, ಶಾಸಕರು ನನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ. ಅವರು ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಆರೋಪ ಮಾಡುತ್ತಿದ್ದಂತೆ ಬೆಂಗಳೂರು ವಿಧಾನಸೌಧಾ ಪೊಲೀಸರು ಬೆಳಗ್ಗೆ ಮನೆಯಿಂದ ಕರೆತಂದು ರಾತ್ರಿ 9 ಗಂಟೆವರೆಗೆ ಸ್ಟೇಷನ್ ನಲ್ಲಿ ಕೂಡಿ ಹಾಕಿದ್ದಾರೆ. ಕಾಂಗ್ರೆಸ್ ನವರು ಮಾಡಿಸಿದ್ದಾರೆ ಅಂತಾ ಹೇಳು ಎಂದು ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ವಿಚಾರ ಏನು ಕೇಳಿದರೂ, ಪೊಲೀಸರು ಸಮಯಕ್ಕೆ ಸರಿಯಾಗಿ ಊಟ ತಿಂಡಿ ಬರುತ್ತದೆ. ತಿಂದು ಸುಮ್ಮನೆ ಕೂರುವಂತೆ ಹೇಳಿದ್ದಾರೆ ಹೊರತು ಯಾವ ವಿಚಾರಕ್ಕಾಗಿ ಕೆರದುಕೊಂಡು ಬಂದಿದ್ದೇವೆ ಎನ್ನುವುದರ ಬಗ್ಗೆ ಹೇಳಲೇ ಇಲ್ಲ. ನನಗೆ ಮೋಸ ಆಗಿದೆ, ನನಗೆ ನ್ಯಾಯಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.