ಮೈಸೂರು : ಹಿಜಬ್ ಧರಿಸಿ ಅಧಿವೇಶನಕ್ಕೆ ಬರುವೆ ಎಂದು ಕಲಬುರಗಿ ಶಾಸಕಿ ಖನೀಜ್ ಫಾತೀಮಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ ಹಿಜಬ್ ಹಾಕಿಕೊಂಡು ಅಧಿವೇಶನಕ್ಕೆ ಬರುವುದಲ್ಲ. ನೀವು ಮೊದಲು ಮಸೀದಿಗೆ ಹೋಗಿ. ನಿಮಗೆ ಧಮ್ ಇದ್ದರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ ಎಂದು ಸವಾಲಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾವು ಶಾಲೆಗೆ ಮಾತ್ರ ಹಿಜಬ್ ನಿಷೇಧಿಸಿದ್ದೇವೆ. ಹೊರಗಡೆಗೆ ನಿಷೇಧ ಮಾಡಿಲ್ಲ ಎಲ್ಲಾ ಕಡೆ ಹಾಕಿಕೊಂಡು ಹೋಗಬಹುದು ಎಂದರು. ಹಿಜಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶವಾಗುವುದು ಖಚಿತ. ಈ ಹಿಂದೆ ಗೋ ಹತ್ಯೆ ನಿಷೇಧವನ್ನು ಉಡುಪಿಯಲ್ಲೇ ಮಾಡಿದ್ದರು. ಆಗ ಸಿದ್ದರಾಮಯ್ಯ ಸಿಎಂ ಅಧಿಕಾರ ಕಳೆದುಕೊಂಡರು. ಚಾಮುಂಡೇಶ್ವರಿಯಲ್ಲೂ ಸೋತರು ಈಗ ಅಲ್ಲಿಂದಲೇ ಹಿಜಬ್ ವಿವಾದ ಸೃಷ್ಟಿಯಾಗಿದೆ. ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಮುಖಂಡರಿಂದ ಈ ಕೆಲಸವಾಗುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡರು ಮನಸು ಮಾಡಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತು. ಆ ಆರು ಜನ ವಿದ್ಯಾರ್ಥಿನಿಯರಿಗೆ ತಿಳುವಳಿಕೆ ನೀಡಬಹುದಿತ್ತು. ಆದರೆ ಕಾಂಗ್ರೆಸ್ ಗೆ ಮುಸ್ಲಿಂ ಮತಗಳೇ ಮುಖ್ಯವಾದವು. ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಹಿಂದೂ ಮುಸ್ಲಿಂ ಒಡೆದಿದ್ದು ಕಾಂಗ್ರೆಸ್ ಅಪವಾದ ಮಾತ್ರ ಬಿಜೆಪಿ ಮೇಲೆ ಎಂದು ಸಚಿವರು ಕಿಡಿಕಾರಿದರು.
ಹಿಜಬ್ ವಿಚಾರದಲ್ಲಿ ಎಂ.ಎಲ್.ಸಿ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ವಿಕೃತಿಯಿಂದ ಕೂಡಿದ ಹೇಳಿಕೆ. ಇದು ಮುಸ್ಲಿಂ ಮಹಿಳೆಯರಿಗೆ ಮಾಡಿದ ಅವಮಾನ. ಅವರ ಮುಖ ನೋಡಲು ಹಿಜಬ್ ತೆಗೆಯಬೇಕಾ? ಇಬ್ರಾಹಿಂ ಅವರ ಈ ಹೇಳಿಕೆ ಯಾರೂ ಒಪ್ಪುವಂತದಲ್ಲ. ಸಮವಸ್ತ್ರದ ಹಿನ್ನೆಲೆಯಿಂದ ಈ ಆದೇಶ ಮಾಡಲಾಗಿದೆ ಎಂದರು.










