7 ರಾಜ್ಯಗಳಲ್ಲಿ 14 ಮಹಿಳೆಯರನ್ನು ವಿವಾಹವಾಗಿದ್ದ ವ್ಯಕ್ತಿ ಅರೆಸ್ಟ್!

61
firstsuddi

ಒಡಿಶಾ : ಸುಮಾರು 48 ವರ್ಷಗಳಲ್ಲಿ 7 ರಾಜ್ಯಗಳ 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿರುವ ವ್ಯಕ್ತಿಯನ್ನು ಭುವನೇಶ್ವರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯವನಾದ ಈ ವ್ಯಕ್ತಿ, ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಅಲ್ಲಿ ಸಿಕ್ಕ ಮಹಿಳೆಯನ್ನು ಮದುವೆಯಾಗಿ ಬಳಿಕ ಓಡಿಹೋಗುವ ಮುನ್ನ ಮಹಿಳೆಯರಿಂದ ಹಣವನ್ನು ಪಡೆದು ವಂಚಿಸಿ ಪರಾರಿಯಾಗುತ್ತಿದ್ದ ಎಂದು ಆರೋಪಿಸಲಾಗಿದೆ.

ಈ ವ್ಯಕ್ತಿ ಮೊದಲು ವಿವಾಹವಾಗಿದ್ದು 1982ರಲ್ಲಿ, ಎರಡನೇ ಬಾರಿಗೆ 2002ರಲ್ಲಿ ವಿವಾಹವಾದ. ಈ ಇಬ್ಬರು ಪತ್ನಿಯರಿಗೆ ಐವರು ಮಕ್ಕಳಿದ್ದಾರೆ. ಅದಾದ ನಂತರ 2002ರಿಂದ 2020ರವರೆಗೆ ಉಳಿದ ಮದುವೆಯಾದ. ಮ್ಯಾಟ್ರಿಮೋನಿಯಲ್ ವೆಬ್‍ಸೈಟ್‍ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ತಾನೊಬ್ಬ ಅವಿವಾಹಿತ ಎಂದು ಬಿಂಬಿಸಿ ಕೃತ್ಯ ಎಸಗುತ್ತಿದ್ದ. ಇದು ಆತನ ಮೊದಲ ಇಬ್ಬರು ಪತ್ನಿಯರಿಗೆ ಗೊತ್ತಿರಲಿಲ್ಲ ಎಂದು ಭುವನೇಶ್ವರ್ ಡೆಪ್ಯೂಟಿ ಕಮಿಷನರ್ ಪೊಲೀಸ್ ಉಮಾಶಂಕರ್ ದಾಸ್ ತಿಳಿಸಿದ್ದಾರೆ.

ತನ್ನನ್ನು ವೈದ್ಯ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದು, ವಕೀಲರು, ಶಿಕ್ಷಕಿ, ವೈದ್ಯರು, ಉನ್ನತ ಶಿಕ್ಷಣ ಪಡೆದವರನ್ನೇ ವಿವಾಹವಾಗಿದ್ದಾನೆ. ಪ್ಯಾರಾ ಮಿಲಿಟರಿ ಪಡೆಗಳಲ್ಲಿ ಕೆಲಸ ಮಾಡುವ ಮಹಿಳೆಯನ್ನೂ ಕೂಡಾ ಇದೇ ರೀತಿಯಾಗಿ ವಿವಾಹವಾಗಿದ್ದಾನೆ ಎಂದು ತಿಳಿದುಬಂದಿದೆ.

ದೆಹಲಿ, ಪಂಜಾಬ್, ಅಸ್ಸಾಂ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಏಳು ರಾಜ್ಯಗಳಲ್ಲಿ ಮಹಿಳೆಯರನ್ನು ಈ ವ್ಯಕ್ತಿ ವಂಚಿಸಿದ್ದಾನೆ. ಕೊನೆಯ ಪತ್ನಿ ದೆಹಲಿಯವರಾಗಿದ್ದು, ಶಿಕ್ಷಕಿಯಾಗಿದ್ದಾರೆ. ಅದು ಹೇಗೋ ತನ್ನ ಪತಿಯ ಹಿಂದಿನ ಮದುವೆಯ ಬಗ್ಗೆ ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದರು. ಆಕೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಬಳಿಯಿದ್ದ 11 ಎಟಿಎಂ ಕಾರ್ಡ್ಗಳು, ನಾಲ್ಕು ಆಧಾರ್ ಕಾರ್ಡ್ ಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.