ಮಂಗಳೂರು : ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ನಗರದ ಖಾಸಗಿ ಕಾಲೇಜಿನಲ್ಲಿ ಎರಡು ವಿದ್ಯಾರ್ಥಿಗಳ ತಂಡಗಳ ನಡುವಿನ ಘೋಷಣೆಯ ವಿಡಿಯೋ ಸುದ್ದಿ ಸುಳ್ಳು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಿನ್ನೆ ನಡೆದಿರುವ ಘಟನೆಯೆಂದು ಕೇಸರಿ ಹಾಗೂ ಹಿಜಾಬ್ ಬಗ್ಗೆ ವಿದ್ಯಾರ್ಥಿಗಳ ತಂಡಗಳ ನಡುವಿನ ಘೋಷಣೆಯ ವಿಡಿಯೋ ವೈರಲ್ ಆಗುತ್ತಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಂಗಳೂರು ಪೊಲೀಸ್ ಆಯುಕ್ತರು ಈ ಬಗ್ಗೆ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಮಂಗಳೂರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಹಿಜಾಬ್, ಕೇಸರಿ ಶಾಲುಗಳ ನಕಲಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ.
ವೀಡಿಯೋಗಳನ್ನು ಸೂಕ್ಷ್ಮವಾಗಿ ನೋಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದು, ಮಂಗಳೂರಿನದ್ದಲ್ಲ ಎಂದು ತಿಳಿದು ಬಂದಿದೆ. ಹಿಜಾಬ್- ಕೇಸರಿ ಶಾಲು ವಿವಾದದ, ಬೇರೆ ಕಡೆ ನಡೆದ ಹಳೆಯ ವೀಡಿಯೋಗಳನ್ನು ಸರ್ಕ್ಯೂಲೇಟ್ ಮಾಡಿಕೊಂಡು ನಗರದ ಅಲೋಶಿಯಸ್ ಮತ್ತು ಬೇರೆ ಬೇರೆ ಕಾಲೇಜುಗಳಲ್ಲಿ ನಡೆದ ಘಟನೆ ಎಂದು ಹೆಸರಿಸಿಕೊಂಡು ಸುಳ್ಳು ಸದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನಗರದಲ್ಲಿ ಎಲ್ಲವೂ ಶಾಂತಿಯುತವಾಗಿ ಹೈಕೋರ್ಟ್ ಆದೇಶದ ಅನುಸಾರ ಎಲ್ಲರೂ ಸಹಕರಿಸುತ್ತಿದ್ದಾರೆ. ಈ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.










