ಚಂಬೆಳಕಿನ ಕವಿ ಚೆನ್ನವೀರ ಕಣವಿ ನಿಧನಕ್ಕೆ ಗಣ್ಯರ ಸಂತಾಪ…

100
firstsuddi

ಬೆಂಗಳೂರು : ಇಂದು ಚಂಬೆಳಕಿನ ಕವಿ ಚೆನ್ನವೀರ ಕಣವಿ ಅವರು ಧಾರವಾಡದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಣವಿ ಅವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಾಡು ಕಂಡಂತಹ ಅತ್ಯಂತ ಸೃಜನಶೀಲ ಸಾಹಿತ್ಯ ರಚನೆಕಾರರು, ಚಂಬೆಳಕಿನ ಕವಿ, ನಾಡೋಜ ಶ್ರೀ ಚೆನ್ನವೀರ ಕಣವಿ ಅವರು ನಿಧನರಾದ ವಿಷಯ ತಿಳಿದು ತುಂಬಾ ದುಃಖಿತನಾಗಿದ್ದೇನೆ. ಸಾಹಿತ್ಯದ ಮುಖಾಂತರ ಅವರು ತಮ್ಮ ಕಲ್ಪನೆ ಹಾಗೂ ವಾಸ್ತವಾಂಶವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ ಕವಿ ಆಗಿದ್ದರು. ಪ್ರಶಸ್ತಿಗಳಿಗೆ ಗೌರವ ಬರುವ ವ್ಯಕ್ತಿತ್ವ ಅವರದಾಗಿತ್ತು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ಹಾನಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗು ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿಯೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.

ಕನ್ನಡದ ಜನಪ್ರಿಯ ಹಿರಿಯ ಸಾಹಿತಿ ನಾಡೋಜ ಡಾ.ಚನ್ನವೀರ ಕಣವಿ ವಿಧಿವಶರಾದ ಸಂಗತಿ ತಿಳಿದು ಆಘಾತವುಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಅವರ ಕುಟುಂಬ ವರ್ಗದವರಿಗೆ ಹಾಗು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ, ಕಣವಿ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಹಿರಿಯ ಸಾಹಿತಿ, ನಾಡೋಜ ಡಾ.ಚೆನ್ನವೀರ ಕಣವಿ ಅವರು ವಿಧಿವಶರಾದ ಸುದ್ದಿ ಅತ್ಯಂತ ದುಃಖವನ್ನು ತಂದಿದೆ. ಸಮನ್ವಯ ಕವಿ ಎಂದೇ ಹೆಸರಾಗಿದ್ದ ಕಣವಿಯವರನ್ನು ಕಳೆದುಕೊಂಡು ಕನ್ನಡ ಸಾರಸ್ವತ ಲೋಕ ಅನಾಥವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬ ಹಾಗೂ ಅಸಂಖ್ಯ ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ.

ಕನ್ನಡದ ಸಾಹಿತ್ಯ ಲೋಕದ ನಕ್ಷತ್ರದಂತಿದ್ದ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಬಹು ದೊಡ್ಡ ನಷ್ಟ ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ಆಧುನಿಕ ಕನ್ನಡ ಕಾವ್ಯದ ಮೇರು ಪ್ರತಿಭೆಗಳಲ್ಲಿ ಒಬ್ಬರು, ಹೊಂಬೆಳಕಿನ ಕವಿ, ಸುನೀತಗಳ ಸಾಮ್ರಾಟರೆಂದೇ ಕನ್ನಡಿಗರ ಮನಸ್ಸುಗಳಲ್ಲಿ ತುಂಬಿಹೋಗಿರುವ ನಾಡೋಜ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಣವಿ ಅವರು ಚೇತರಿಸಿಕೊಂಡು ಕ್ಷೇಮವಾಗಿ ಮನೆಗೆ ಮರಳುತ್ತಾರೆಂಬ ನಮ್ಮೆಲ್ಲರ ನಿರೀಕ್ಷೆಯನ್ನು ಹುಸಿ ಮಾಡಿ ಅಗಲಿದ್ದಾರೆ. ಅವರಿಲ್ಲದಿರುವಿಕೆ ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿ ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಕುಟುಂಬದವರು, ನಾಡಿನ ಜನರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಟ್ವೀಟ್ ಮಾಡಿದ್ದು, ಕಣವಿ ಅವರ ಕವಿತೆಯೊಂದನ್ನು ಉಲ್ಲೇಖಿಸಿದ್ದಾರೆ.