ಚಿಕ್ಕಮಗಳೂರು : ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು, ಕಾಶ್ಮೀರದಲ್ಲಿ ಸಿದ್ದರಾಮಯ್ಯ ಅವರ ಮಕ್ಕಳು, ಮೊಮ್ಮೊಕ್ಕಳು ಉಳಿಯುತ್ತಿರಲಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರು ಸಿದ್ರಾಮುಲ್ಲಾ ಖಾನ್ ಆಗಿದ್ದರೆ ಮಾತ್ರ ಉಳಿದಕೊಳ್ಳೋರು ಎಂದು ವ್ಯಂಗ್ಯವಾಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಿ ಕಾಶ್ಮೀರ್ ಫೈಲ್ಸ್’ ಸತ್ಯದ ಘಟನೆಗಳನ್ನು ಆಧರಿಸಿದ ಚಿತ್ರ. ಸಿದ್ದರಾಮಯ್ಯ ಅವರು ವಕೀಲರಿದ್ದಾರೆ, ತಿಳಿವಳಿಕೆಯುಳ್ಳವರಾಗಿದ್ದಾರೆ. ಸಿನಿಮಾದ ಘಟನೆಗಳ ಬಗ್ಗೆ ಆಕ್ಷೇಪ ಇರುವವರಿಗೆ ಆಯಾ ಕಾಲಘಟ್ಟದ ಸರ್ಕಾರಿ ದಾಖಲೆಗಳನ್ನು ಪರಿಗಣಿಸಿದರೆ ಸತ್ಯ ಅರಿವಾಗುತ್ತದೆ. ಸಿನಿಮಾದ ಸತ್ಯವನ್ನು ಟೀಕಿಸುವ ಕಾಂಗ್ರೆಸ್ ನಾಯಕರಿಗೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದರು.
ಗಾಂಧಾರಿ ಎಂದೇ ಪ್ರಸಿದ್ಧವಾಗಿದ್ದ ಆಫ್ಘಾನಿಸ್ತಾನದ ಬಾಮಿಯಾನ್ ನಲ್ಲಿದ್ದ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ತಾಲಿಬಾನಿಗಳು ಫಿರಂಗಿ ಇಟ್ಟು ಉಡಾಯಿಸಿದ್ದು, ಕಾಶ್ಮೀರಿ ಪಂಡಿತರು, ಹಿಂದೂಗಳು ಕಾಶ್ಮೀರ ಕಣಿವೆಯನ್ನು ತೊರೆಯಬೇಕೆಂದು ಮೈಕ್ ಮೂಲಕ ಕೂಗಿದರು. ಅಲ್ಲದೇ, ಹಿಂದೂಗಳಲ್ಲಿ ಭಯ ಹುಟ್ಟಿಸಲು ಅವರನ್ನು ಕೊಲೆ ಮಾಡಿದರು. ಕಾಶ್ಮೀರಿ ಭಯೋತ್ಪಾದನೆಯ ಬಗ್ಗೆ ಸಾಕ್ಷಿ ಬೇಕಾದರೆ ಸಾವಿರ ಸಿಗುತ್ತವೆ. ಅಂದು ಸಂತ್ರಸ್ತರಾಗಿ ಊರು ಬಿಟ್ಟು ಬಂದ ನೂರಾರು ಕಾಶ್ಮೀರಿ ಪಂಡಿತರ ಕುಟುಂಬದವರು ಇನ್ನೂ ಬದುಕಿದ್ದಾರೆ. ಅವರ ಬಳಿ ಈ ಬಗ್ಗೆ ಎಲ್ಲಾ ದಾಖಲೆಗಳು ಇರುತ್ತವೆ. ಎಲ್ಲದರಲ್ಲೂ ರಾಜಕೀಯ ಹುಡುಕುವ ಪೂರ್ವಾಗ್ರಹ ಮನಸ್ಥಿತಿಗೆ ಇದೆಲ್ಲವೂ ಅರ್ಥವಾಗುವುದಿಲ್ಲ ಎಂದು ಟೀಕಿಸಿದರು.










