ಕೋವಿಡ್​ನಿಂದ ಗುಣಮುಖರಾದವರಲ್ಲಿ ಕ್ಷಯ ರೋಗ ಪತ್ತೆ : ಸಚಿವ ಸುಧಾಕರ್.

72
firstsuddi

ಬೆಂಗಳೂರು : ಕೋವಿಡ್ ನಿಂದ ಗುಣಮುಖರಾದವರ ಪೈಕಿ ಹಲವರಲ್ಲಿ ಕ್ಷಯ ರೋಗ ಪತ್ತೆಯಾಗಿದೆ. ರಾಜ್ಯದಲ್ಲಿ ಕೋವಿಡ್ ನಿಂದ ಗುಣಮುಖರಾದವರಿಗೆ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದಲೇ ಕ್ಷಯ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಗೊಳಪಟ್ಟ 25 ಲಕ್ಷ ಜನರಲ್ಲಿ 144 ಜನರಿಗೆ ಕ್ಷಯ ದೃಢಪಟ್ಟಿದೆ. ಕೋವಿಡ್ ಬಂದ ಬಳಿಕವೇ ಇವರಿಗೆ ಕ್ಷಯ ಬಂದಿದೆ. ಹೀಗಾಗಿ ಈ ಕುರಿತು ವಿಸ್ತೃತವಾದ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಸೌಧದಲ್ಲಿ ನಡೆದ ‘ವಿಶ್ವ ಕ್ಷಯರೋಗ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ನಂತೆಯೇ ಕ್ಷಯವೂ ಸಾಂಕ್ರಾಮಿಕ ರೋಗ. 2030ರ ವೇಳೆಗೆ ಜಗತ್ತನ್ನು ಕ್ಷಯರೋಗದಿಂದ ಮುಕ್ತ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2025ರೊಳಗೆ ಭಾರತವನ್ನು ಕ್ಷಯ ಮುಕ್ತ ಮಾಡಬೇಕು ಎಂಬ ಗುರಿ ಹೊಂದಿದೆ. ಇದು ಕೇವಲ ವೈದ್ಯರು ಅಥವಾ ಸರ್ಕಾರದಿಂದ ಸಾಧ್ಯವಿಲ್ಲ. ಇದಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯ. ಎರಡು ವಾರಕ್ಕೂ ಹೆಚ್ಚು ಕಾಲ ಕೆಮ್ಮು, ಜ್ವರ, ತೂಕ ಇಳಿಕೆಯಾಗುವುದು ಮೊದಲಾದ ಲಕ್ಷಣ ಕಂಡುಬಂದರೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು. ಈಗ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯ ಪರೀಕ್ಷೆ ಮಾಡುವ ಸೌಲಭ್ಯವಿದೆ. ಬೇಗ ಪರೀಕ್ಷೆ ಮಾಡಿಸಿದರೆ ಉತ್ತಮ ಚಿಕಿತ್ಸೆ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಗ್ರಾಮೀಣ ಭಾಗಗಳಲ್ಲಿ ಜನರು ಖಾಯಿಲೆ ಇದ್ದರೂ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸುವುದಿಲ್ಲ. ಒಬ್ಬ ಕ್ಷಯ ರೋಗಿಯಿಂದ ಕನಿಷ್ಠ 10 ಜನರಿಗೆ ರೋಗ ಹರಡಬಹುದು. ಆದ್ದರಿಂದ ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕಿದೆ. ರಾಜ್ಯ ಸರ್ಕಾರ ರೋಗಗಳ ಬಗ್ಗೆ ಅರಿವು ಮೂಡಿಸಲು ವರ್ಷಕ್ಕೆ 5 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡುತ್ತಿದೆ ಎಂದು ಹೇಳಿದರು. ಕ್ಷಯ ನಿಯಂತ್ರಣದಲ್ಲಿ ರಾಜ್ಯದ ಐದು ಜಿಲ್ಲೆಗಳಿಗೆ ಬೆಳ್ಳಿ ಪದಕ ಬಂದಿದೆ. ಅದೇ ರೀತಿ 9 ಜಿಲ್ಲೆಗಳಿಗೆ ಕಂಚಿನ ಪದಕ ಲಭಿಸಿದೆ. ಒಟ್ಟು 14 ಜಿಲ್ಲೆಗಳಲ್ಲಿ ಕ್ಷಯ ನಿಯಂತ್ರಣದಲ್ಲಿ ಗಮನಾರ್ಹ ಸಾಧನೆಯಾಗಿರುವುದು ಶ್ಲಾಘನೀಯ ಎಂದರು.