ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗುತ್ತಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸರ್ಕಾರ ಸಮವಸ್ತ್ರ ನಿಯಮ ಕಡ್ಡಾಯ ಮಾಡಿದ್ದು, ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ಇರುವುದಿಲ್ಲ. ಇಂದಿನಿಂದ ಏಪ್ರಿಲ್ 11 ರ ವರೆಗೆ ಪರೀಕ್ಷೆ ನಡೆಯಲಿದ್ದು, ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ. ಕೊರೊನಾ ಕಾರಣಕ್ಕೆ ಕಳೆದ ವರ್ಷ ಎರಡು ದಿನ ಮಾತ್ರ ಪರೀಕ್ಷೆ ನಡೆದಿತ್ತು. ಆದರೆ ಈ ವರ್ಷ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ 625 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
ಈ ಬಾರಿ ಒಟ್ಟು 8,73,846 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 4,52,732 ಗಂಡು ಮಕ್ಕಳು ಹಾಗೂ 4,21,110 ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗೆ 15,387 ಶಾಲೆಗಳು ನೋಂದಾಯಿಸಿಕೊಂಡಿದ್ದು, 3,444 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 144ನೇ ಸೆಕ್ಷನ್ ಅನ್ವಯ ನಿರ್ಬಂಧ ಆದೇಶ ಜಾರಿ ಮಾಡಲಾಗಿದೆ.
ಈ ನಡುವೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭ ಹಾರೈಸಿದ್ದಾರೆ. ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿರುವ ನನ್ನೆಲ್ಲಾ ಪ್ರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಯಶಸ್ಸು ನಿಮ್ಮದಾಗಲಿ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.










