ಆಜಾನ್ ವಿವಾದ.. ಸರ್ಕಾರ ಯಾವುದೇ ಹೊಸ ಕಾನೂನು ತಂದಿಲ್ಲ : ಬೊಮ್ಮಾಯಿ

64
firstsuddi

ಬೆಂಗಳೂರು : ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಯಾವುದೇ ಸಮಾಜ ಆಗಲಿ, ಯಾವುದೇ ಸಂಘಟನೆ ಆಗಲಿ ಕಾನೂನನ್ನು ಕೈಗೆ ತೆಗೆದುಕೊಳ್ಳದೇ ಶಾಂತಿ-ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲಾ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದು ಆಜಾನ್ ವಿವಾದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವೆಲ್ಲಾ ಹೊಸ ವಿಚಾರಗಳೇನು ಅಲ್ಲ, ಹಲವಾರು ವರ್ಷಗಳಿಂದ ಇವೆ. ಹೈಕೋರ್ಟ್ ನ ತೀರ್ಪುಗಳು ಕೂಡ ಹಳೆಯವೇ. ನಾವು ಯಾವುದೇ ಹೊಸ ಆದೇಶಗಳನ್ನು ಮಾಡಿಲ್ಲ. ಆಜಾನ್ ಕುರಿತು ಈಗಾಗಲೇ ಹೈಕೋರ್ಟ್ ಆದೇಶವಿದೆ. ಆಜಾನ್ ಗೆ ಡೆಸಿಬಲ್ ಪ್ರಮಾಣ ನಿಗದಿಗೊಳಿಸಿದೆ. ಡೆಸಿಬಲ್ ತಪಾಸಣೆ ಮಾಡುವ ಯಂತ್ರ ಖರೀದಿ ಮಾಡುವ ಹಾಗೂ ಹೈಕೋರ್ಟ್ ಆದೇಶಗಳನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮಾಡಬೇಕಿರುವ ಕೆಲಸ ಇದು. ಸಂಘಟನೆಗಳು, ಸಂಘ-ಸಂಸ್ಥೆಗಳ ಜೊತೆ ಮಾತುಕತೆ ನಡೆಸಿ ನ್ಯಾಯಾಲಯಗಳು ನೀಡಿರುವ ತೀರ್ಪನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದರು.

ಇಂದು ಮಧ್ಯಾಹ್ನ ನಾನು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ಸಂಜೆ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆ ಮಾತುಕತೆ ನಡೆಸಲಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಹೈಕಮಾಂಡ್ ನಾಯಕರ ಜೊತೆಗೂ ನಾಳೆ ಸಮಾಲೋಚನೆ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ನಾಳೆ ಬೆಳಗ್ಗೆ ಜಿಎಸ್ ಟಿ ವಿಚಾರ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುತ್ತೇನೆ. ನಂತರ ಸಂಗೊಳ್ಳಿ ರಾಯಣ್ಣ ಶಾಲೆಯನ್ನು ಸೈನಿಕ ಶಾಲೆಯನ್ನಾಗಿ ಮಾಡಲು ಒಪ್ಪಿಗೆ ಸಿಕ್ಕಿದೆ. ಅದರ ಬಗ್ಗೆ ಕೆಲವು ವಿಚಾರಗಳನ್ನು ಮಾತನಾಡಬೇಕಿದೆ. ಹಾಗಾಗಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗುತ್ತೇನೆ. ಇಂಧನ ಸಚಿವರನ್ನು ಭೇಟಿಯಾಗುವ ಪ್ರಯತ್ನ ನಡೆಸುತ್ತಿದ್ದೇನೆ. ಇದಕ್ಕೆ ಇನ್ನೂ ಸಮಯಾವಕಾಶ ನಿಗದಿಯಾಗಿಲ್ಲ. ಅವಕಾಶ ಸಿಕ್ಕಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಾಗುತ್ತದೆ ಎಂದರು.

ನನಗೆ ಇದುವರೆಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರ ನಾಯಕರಿಂದ ಸೂಚನೆ ಬಂದಿಲ್ಲ. ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರ ಭೇಟಿಯಾದಾಗ ಸೂಚನೆ ಬರಬಹುದು ಎಂಬ ನಿರೀಕ್ಷೆಯಿದೆ ಎಂದರು.