ಬೆಂಗಳೂರು : ಪ್ರಥಮ ದರ್ಜೆ ಕಾಲೇಜುಗಳಲ್ಲಿ 44 ಉಪನ್ಯಾಸಕರು ಕಾರ್ಯಭಾರದ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ಕಾರ್ಯಭಾರ ಇರುವ ಕಾಲೇಜಿಗೆ ವರ್ಗಾಯಿಸಲು ತೀರ್ಮಾನ ಮಾಡಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಲಾಖೆಯಿಂದ ಸುತ್ತೋಲೆ ಮೂಲಕ ವರ್ಗಾವಣೆಯಾಗಲಿರುವ ಉಪನ್ಯಾಸಕರ ಹೆಸರು ಪ್ರಕಟ ಮಾಡಲಾಗಿದೆ. ಇಲಾಖೆಯ ಇಎಂಐಎಸ್ ತಂತ್ರಾಂಶದಲ್ಲಿ ಲಭ್ಯವಿರುವ ಅಭ್ಯರ್ಥಿಗಳ ಸೇವಾ ವಿವರ ಪರಿಗಣಿಸಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಬದಲಾವಣೆ/ ಆಕ್ಷೇಪಣೆ ಇದ್ದಲ್ಲಿ ಏಪ್ರಿಲ್ 6 ರ ಒಳಗೆ ಇಲಾಖೆಯ ಇ-ಮೇಲ್ dce.postshifting2022@gmail.com ಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಏಪ್ರಿಲ್ 7 ರಂದು ಹುದ್ದೆ ಸ್ಥಳಾಂತರ ಮತ್ತು ಹೆಚ್ಚುವರಿ ಕಾರ್ಯಭಾರ ಲಭ್ಯವಿರುವ ಕಾಲೇಜುಗಳ ಅಂತಿಮ ಪಟ್ಟಿ ಪ್ರಕಟ ಮಾಡಲಾಗುತ್ತದೆ. ಏಪ್ರಿಲ್ 8 ರಂದು ವರ್ಗಾವಣೆಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ನಿಯಮಗಳ ಪ್ರಕಾರ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ ಮತ್ತು ಭಾಷಾ ವಿಷಯಗಳ ಬೋಧಕರಿಗೆ ವಾರಕ್ಕೆ 16 ಗಂಟೆ ಮತ್ತು ಪ್ರಾಯೋಗಿಕ ತರಗತಿಗಳಿರುವ ವಿಷಯಗಳ ಬೋಧಕರಿಗೆ 20 ಗಂಟೆಗಳ ಕಾರ್ಯಭಾರ ಇರಬೇಕು. ವರ್ಗಾವಣೆ ಪ್ರಕ್ರಿಯೆಯಲ್ಲಿ ಸಾಧ್ಯವಾದಷ್ಟೂ ಮಟ್ಟಿಗೆ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿರುವ ವಲಯದೊಳಗೇ ವರ್ಗಾವಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಪಿ.ಪ್ರದೀಪ್ ತಿಳಿಸಿದ್ದಾರೆ.










