ಎಸಿ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನ…

53
firstsuddi

ವಿಜಯನಗರ : ಎಸಿ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಗ್ರಾಮದಲ್ಲಿ ಕಳೆದ ತಡರಾತ್ರಿ ನಡೆದಿದೆ.

ಮೃತರನ್ನು ಡಿ.ವೆಂಕಟ್ ಪ್ರಶಾಂತ್ ( 42) ಮತ್ತು ಆತನ ಹೆಂಡತಿ ಡಿ ಚಂದ್ರಕಲಾ (38) ಹಾಗೂ ಅವರ ಮಕ್ಕಳಾದ ಹೆಚ್ ಎ ಅರ್ದ್ವಿಕ್ (16) ಹಾಗೂ ಪ್ರೇರಣಾ (8) ಎಂದು ಗುರುತಿಸಲಾಗಿದೆ. ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಎಸಿ ಸ್ಫೋಟಗೊಂಡು ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಮರಿಯಮ್ಮನಹಳ್ಳಿ 5ನೇ ವಾರ್ಡಿನಲ್ಲಿರುವ ಶ್ರೀ ರಾಘವೇಂದ್ರ ಶೆಟ್ಟಿ ಅವರ ಮನೆಯಲ್ಲಿ ಅವಘಡ ಸಂಭವಿಸಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಸಿಯ ವಿಷಾನಿಲ ಸೋರಿಕೆಯಾಗಿದ್ದು, ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಎಲ್ಲರೂ ಮನೆಯಲ್ಲಿ ಮಲಗಿದ್ದು, ಬೆಂಕಿ ಶಾಖಕ್ಕೆ ರಾಘವೇಂದ್ರ ಶೆಟ್ಟಿ ಮತ್ತು ಆತನ ಪತ್ನಿ ರಾಜೇಶ್ವರಿ ಗಾಬರಿಯಿಂದ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಆದರೆ ದಂಪತಿ ಮತ್ತು ಮಕ್ಕಳು ಹೊರಬರಲಾಗದೇ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.