2ನೇ ಡೋಸ್ ಪಡೆದಿಲ್ಲದವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು : ಸುಧಾಕರ್.

54
firstsuddi

ಬೆಂಗಳೂರು : ಅನೇಕ ಜನರು ಲಸಿಕೆ ಪಡೆದಿಲ್ಲ. 2ನೇ ಡೋಸ್ ಪಡೆದಿಲ್ಲದವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಬೂಸ್ಟರ್ ಡೋಸ್ ಕೂಡಾ ಪಡೆಯಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಪೋಷಕರು ಲಸಿಕೆ ಕೊಡಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಇದೆ. ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇರುತ್ತಾರೆ. ನಾನು ಕೂಡಾ ಎರಡು ವಾರಗಳಿಂದ ನಮ್ಮ ಇಲಾಖೆ ಅಧಿಕಾರಿಗಳ ಜೊತೆ ಸತತವಾಗಿ ಸಂಪರ್ಕದಲ್ಲಿ ಇದ್ದೇನೆ. 4 ನೇ ಅಲೆ ಹೇಗೆ ರಿಯಾಕ್ಟ್ ಮಾಡುತ್ತದೆ. ಹೊಸ ಪ್ರಭೇಧ ಏನಾದರೂ ಇದೆಯಾ ಅಂತ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಆದಷ್ಟು ಬೇಗ 5 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಬರಲಿದೆ. ಈ ಎಲ್ಲಾ ಅಂಶಗಳನ್ನು ಇವತ್ತಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಕೊರೊನಾ ತಡೆಗಟ್ಟಲು ಯಾವ ಕ್ರಮಕೈಗೊಳ್ಳಬೇಕು ಮತ್ತು ನಿಯಮಗಳ ಬಗ್ಗೆ ತಜ್ಞರ ಸಲಹೆ ಪಡೆಯುತ್ತೇವೆ ಎಂದಿದ್ದಾರೆ.

ಜನರು ಮಾಸ್ಕ್ ಧರಿಸುತ್ತಿಲ್ಲ. ಕೋವಿಡ್ ಹೊರಟು ಹೋಗಿದೆ ಅಂತ ಅಂದುಕೊಂಡಿದ್ದಾರೆ. ಆದರೆ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ನಮ್ಮಲ್ಲಿ ಓಮಿಕ್ರಾನ್ ಸಬ್ ವೇರಿಯಂಟ್ ಕಂಡು ಬಂದಿಲ್ಲ. ಈಗಾಗಲೇ ಲ್ಯಾಬ್ ನಿಂದ ಕೇಂದ್ರಕ್ಕೆ ಮಾಹಿತಿ ರವಾನೆ ಆಗಿದೆ. ಕೇಂದ್ರದಿಂದ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಕೊಟ್ಟಿಲ್ಲ. ಹೀಗಾಗಿ ರಾಜ್ಯದಲ್ಲಿ ಹೊಸ ತಳಿ ಪತ್ತೆ ಬಗ್ಗೆ ಆತಂಕ ಇಲ್ಲ ಎಂದು ಹೇಳಿದ್ದಾರೆ.

ಕೊರೊನಾ 4ನೇ ಅಲೆ ಭೀತಿ ಹಿನ್ನಲೆ ಏರ್ ಪೋರ್ಟ್ ಗಳಲ್ಲಿ ಕಠಿಣ ನಿಯಮಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಸೋಂಕು ಹೆಚ್ಚು ಇರುವ 8 ದೇಶಗಳಿಂದ ಬರುವ ಪ್ರಯಾಣಿಕರಿಗೆ ನಿಯಮ ಜಾರಿ ಮಾಡಲಾಗಿದೆ. ಏರ್ ಪೋರ್ಟ್ ನಲ್ಲಿ ಈ ಹಿಂದೆ ಇದ್ದ ಮಾರ್ಗಸೂಚಿಗಳೇ ಮುಂದುವರಿಕೆ ಆಗುತ್ತವೆ. ದೆಹಲಿ ಸೇರಿದಂತೆ ಕೆಲ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗಿದೆ. 2-3 ವಾರ ಆದ ಮೇಲೆ ನಮ್ಮಲ್ಲಿ ಹೇಗೆ ಸೋಂಕು ಹೆಚ್ಚಳವಾಗುತ್ತದೆ ಎಂಬ ಬಗ್ಗೆ ಗೊತ್ತಾಗಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಔಷಧಿ ಕೊರತೆ ವಿಚಾರವಾಗಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಔಷಧಿ ಕೊರತೆ ಇಲ್ಲ. ಈಗಾಗಲೇ DHO,THOಗಳ ಅಕೌಂಟ್​​ಗೆ ಹಣ ಹಾಕಿದ್ದೇವೆ. ಸ್ಥಳೀಯವಾಗಿ ಅವಶ್ಯಕವಾದ ಔಷಧಿಗಳನ್ನ ಖರೀದಿಗೆ ಅನುಮತಿ ಕೊಟ್ಟಿದ್ದೇವೆ. ಅವರು ಔಷಧಿ ಖರೀದಿ ಮಾಡಬಹುದು ಎಂದು ತಿಳಿಸಿದರು.

ರಾಜ್ಯದಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಳ ವಿಚಾರವಾಗಿ ಮಾತನಾಡಿದ ಸಚಿವರು, ಪಾಸಿಟಿವಿಟಿ ದರದ ಆಧಾರದಲ್ಲಿ ಟೆಸ್ಟಿಂಗ್ ಜಾಸ್ತಿ ಮಾಡುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ನಾವು ಟೆಸ್ಟಿಂಗ್ ಮಾಡುತ್ತಿದ್ದೇವೆ. ಅನಗತ್ಯ ಟೆಸ್ಟ್ ಬೇಕಾಗಿಲ್ಲ. ದೆಹಲಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿದೆ. ಅಲ್ಲಿನ ಎಲ್ಲಾ ಮಾಹಿತಿ ಪಡೆದು ರಾಜ್ಯದ ಕ್ರಮಗಳ ಬಗ್ಗೆ ಇಂದು ಚರ್ಚೆ ಮಾಡುತ್ತೇವೆ ಎಂದರು.