3.36 ಲಕ್ಷ ಕೋಟಿಗೆ ಟ್ವಿಟರ್ ಖರೀದಿಸಿದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್.

45
firstsuddi

ವಾಷಿಂಗ್ಟನ್ : ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು 44 ಬಿಲಿಯನ್ ಅಮೆರಿಕ ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 3.36 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.

ಎಲಾನ್ ಮಸ್ಕ್ ಅವರು ಟ್ವಿಟರ್‌ನಲ್ಲಿ ಶೇ 9.2ರಷ್ಟು ಷೇರು ಪಾಲು ಹೊಂದಿದ್ದರು. ನಂತರದಲ್ಲಿ ಪ್ರತಿ ಷೇರಿಗೆ 54.20 ಡಾಲರ್ (4,149) ನಂತೆ ಪಾವತಿಸಿ, ಪೂರ್ತಿ ಪಾಲು ಖರೀದಿಗೆ ಇಂಗಿತ ವ್ಯಕ್ತಪಡಿಸಿದ್ದರು. ಟ್ವಿಟರ್ ಖರೀದಿ ಪ್ರಸ್ತಾಪಕ್ಕೆ ಮಂಡಳಿ ಸಮ್ಮತಿ ಸೂಚಿಸಿದ್ದು, ಅದರಂತೆ ಹಲವು ದಿನಗಳಿಂದ ನಡೆಯುತ್ತಿದ್ದ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿದೆ.

ಏಪ್ರಿಲ್ 14ರಂದು ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಯ ಪ್ರಸ್ತಾಪ ಮಾಡಿದ್ದರು. ಅಲ್ಲದೆ, ಅಧಿಕ ಷೇರು ಪಾಲು ಹೊಂದಿದ್ದರೂ, ಟ್ವಿಟರ್ ಮಂಡಳಿ ಸೇರುವ ಆಹ್ವಾನವನ್ನು ತಿರಸ್ಕರಿಸಿದ್ದರು. ಇದೀಗ ಪೂರ್ತಿ ಷೇರು ಖರೀದಿಸಿ, ಕಂಪನಿಯನ್ನೇ ತನ್ನದಾಗಿಸಿಕೊಳ್ಳುವ ಮೂಲಕ ಉದ್ಯಮಿ ಮಸ್ಕ್ ಮತ್ತೆ ಸುದ್ದಿಯಾಗಿದ್ದಾರೆ.

” ಟ್ವಿಟರ್ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುವ ಉದ್ದೇಶ ಮತ್ತು ಪ್ರಸ್ತುತತೆಯನ್ನು ಹೊಂದಿದೆ. ನಾನು ನಮ್ಮ ತಂಡಗಳ ಬಗ್ಗೆ ತುಂಬಾ ಹೆಮ್ಮೆ ಹೊಂದಿದ್ದೇನೆ, ಮತ್ತು ಅವರ ಕೆಲಸದಿಂದ ಸ್ಪೂರ್ತಿ ಹೊಂದಿದ್ದೇನೆ. ವಾಕ್ ಸ್ವಾತಂತ್ರ್ಯವು ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವದ ತಳಹದಿಯಾಗಿದೆ ಮತ್ತು ಟ್ವಿಟರ್ ಡಿಜಿಟಲ್ ಟೌನ್ ಸ್ಕ್ವೇರ್ ಆಗಿದ್ದು, ಅಲ್ಲಿ ಮಾನವೀಯತೆಯ ಭವಿಷ್ಯಕ್ಕೆ ಪ್ರಮುಖ ವಿಷಯಗಳು ಚರ್ಚೆಯಾಗುತ್ತವೆ” ಎಂದು ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ.