ಎಸಿ ಇಲ್ಲದೇ ಮಲಗಲು ಪರದಾಡಿದ ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್ ದಿವ್ಯಾ ಹಾಗರಗಿ.

74
firstsuddi

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು11 ದಿನಗಳ ಕಾಲ ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿದೆ. ನಿತ್ಯ ಎಸಿಯಲ್ಲಿ ಹಾಯಾಗಿ ಮಲಗುತ್ತಿದ್ದ ದಿವ್ಯಾ, ಸಾಂತ್ವನ ಕೇಂದ್ರದಲ್ಲಿ ಫ್ಯಾನ್ ಗಾಳಿಯಲ್ಲಿ ನಿದ್ದೆಬಾರದೇ ಪರದಾಡಿದ್ದಾರೆ.

ಪ್ರಕರಣದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಹಾಗೂ ಮೇಲ್ವಿಚಾರಕಿ ಅರ್ಚನಾ, ಸುನೀತಾ ಹಾಗೂ ಇವರಿಗೆ ಆಶ್ರಯ ನೀಡಿದ್ದ ಸೋಲ್ಲಾಪುರ ಮೂಲದ ಉದ್ಯಮಿ ಸುರೇಶ ಕಾಂಟೇಗಾಂವ, ಕಾಳಿದಾಸ, ಚಾಲಕ ಸದ್ದಾಂನನ್ನು ಗುರುವಾರ ರಾತ್ರಿ ಪುಣೆಯಲ್ಲಿ ಬಂಧಿಸಿ ನಿನ್ನೆ ಮಧ್ಯಾಹ್ನದ ಹೊತ್ತಿಗೆ ಕಲಬುರಗಿ ಸಿಐಡಿ ಕಚೇರಿಗೆ ಕರೆತರಲಾಗಿತ್ತು. ಬಳಿಕ ಒಂದಿಷ್ಟು ಪ್ರಾಥಮಿಕ ಕಾರ್ಯವಿಧಾನ ಮುಗಿಸಿ, ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದ ಸಿಐಡಿ, ಸಂಜೆ ವೇಳೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಈ ವೇಳೆ 14 ದಿನ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರ ಮುಂದೆ ಸಿಐಡಿ ಮನವಿ ಸಲ್ಲಿಸಿತ್ತು. ಆದರೆ ನ್ಯಾಯಾಧೀಶರು ಆರು ಆರೋಪಿಗಳನ್ನು 11 ದಿನ ಸಿಐಡಿ ಕಸ್ಟಡಿಗೆ ನೀಡಿದ್ದಾರೆ.

ಆಳಂದ ರಸ್ತೆಯಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ದಿವ್ಯಾಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಸದಾ ಎಸಿ ಕೋಣೆಯಲ್ಲಿ ಮಲಗುತ್ತಿದ್ದ ದಿವ್ಯಾ ಹಾಗರಗಿ ನಿನ್ನೆ ತಡರಾತ್ರಿವರಗೆ ಫ್ಯಾನ್ ಕೆಳಗೆ ನಿದ್ರೆ ಬರದೆ ಪರದಾಡಿದ್ದಾರೆ. ಅಲ್ಲದೇ ನಿನ್ನೆ ಮಧ್ಯಾಹ್ನ ಊಟವನ್ನು ಕೂಡಾ ನಿರಾಕರಿಸಿದ್ದರು. ಆದರೆ ರಾತ್ರಿ ಸ್ವಲ್ಪ ಊಟ ಮಾಡಿದ್ದಾರೆ.

ಇನ್ನೂ ಬಂಧಿತ ಆರೋಪಿ ದಿವ್ಯಾ ಹಾಗರಗಿ ಕೋಟಿ ಕೋಟಿ ಮೌಲ್ಯದ ಆಸ್ತಿ ಇದೆ. ಹಲವು ಶಾಲಾ ಕಾಲೇಜುಗಳು ಸೇರಿ ಹತ್ತಾರು ವ್ಯವಹಾರಗಳು ಇವೆ. ಕಲಬುರಗಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ದಿವ್ಯಾ ಹಾಗರಗಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವೆಲ್ಲವೂ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯಾಗಿದೆ. ಇಷ್ಟೆಲ್ಲ ಐಷಾರಾಮಿ ಜೀವನ ಇದ್ದರೂ ಹಣದ ದುರಾಸೆಗೆ ಬಿದ್ದ ದಿವ್ಯಾ, ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದಾರೆ ಎನ್ನಲಾಗ್ತಿದೆ.