ಬೆಂಗಳೂರು : ಮೇ 1 ರಂದು ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಲೆಫ್ಟಿನೆಂಟ್ ಜನರಲ್ ರಾಜು ಅವರು ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
ಸೈನಿಕ್ ಸ್ಕೂಲ್ ಬಿಜಾಪುರ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಆಗಿರುವ ರಾಜು 1984 ಡಿಸೆಂಬರ್ 15ರಂದು ಜಾಟ್ ರೆಜಿಮೆಂಟ್ ನಲ್ಲಿ ನಿಯೋಜಿಸಲ್ಪಟ್ಟಿದ್ದರು. ವೆಸ್ಟರ್ನ್ ಥಿಯೇಟರ್ ನಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಒಪಿ ಪರಾಕ್ರಮ್ ಸಮಯದಲ್ಲಿ ಅವರು ತಮ್ಮ ಬೆಟಾಲಿಯನ್ನ ನೇತೃತ್ವ ವಹಿಸಿದ್ದರು. ಲೆಫ್ಟಿನೆಂಟ್ ಜನರಲ್ ರಾಜು ಅವರು ಪ್ರಸ್ತುತ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡಿಗರೆಲ್ಲರಿಗೂ ಇದು ಹೆಮ್ಮೆಯ ಕ್ಷಣ ಮತ್ತು ಸಂಭ್ರಮದ ಸಂದರ್ಭವಾಗಿದೆ. ರಾಷ್ಟ್ರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಜನರಲ್ ಬಿ.ಎಸ್.ರಾಜು ಅವರು ರಾಷ್ಟ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಸೇನಾ ಸಿಬ್ಬಂದಿಯ ಹೊಸ ಉಪ ಮುಖ್ಯಸ್ಥರಾಗಿ ನೇಮಕಗೊಂಡಿದ್ದು ಅವರಿಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.










