ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆ ಬಳಸುವಂತೆ ಪ್ರಧಾನಿ ಮೋದಿ ಕರೆ…

67
firstsuddi

ನವದೆಹಲಿ : ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇದು ನ್ಯಾಯ ವ್ಯವಸ್ಥೆಯಲ್ಲಿ ಸಾಮಾನ್ಯ ನಾಗರಿಕರ ವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಅವರು ಅದರೊಂದಿಗೆ ಹೆಚ್ಚು ಸಂಪರ್ಕ ಹೊಂದುವಂತೆ ಮಾಡುತ್ತದೆ ಎಂದು ಹೇಳಿದರು.

ನಮ್ಮ ದೇಶದಲ್ಲಿ, ನ್ಯಾಯಾಂಗದ ಪಾತ್ರವು ಸಂವಿಧಾನದ ರಕ್ಷಕನದ್ದಾಗಿದೆ, ಶಾಸಕಾಂಗವು ನಾಗರಿಕರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಇವೆರಡರ ಸಂಗಮವು ಪರಿಣಾಮಕಾರಿ ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದರು.

ಜೈಲುಗಳಲ್ಲೇ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಆದ್ಯತೆ ನೀಡಿ ಕಾನೂನು ಪ್ರಕಾರ, ಮಾನವ ಸಂವೇದನೆಯ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಮೋದಿ ಮನವಿ ಮಾಡಿದರು. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯಿದ್ದು, ಈ ಪ್ರಕರಣಗಳನ್ನು ಪರಿಶೀಲಿಸಬಹುದು. ಸಾಧ್ಯವಾದಲ್ಲೆಲ್ಲ ಅಂತಹ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ತಿಳಿಸಿದ್ದಾರೆ.

2015 ರಲ್ಲಿ, ನಾವು ಅಪ್ರಸ್ತುತವಾದ ಸುಮಾರು 1,800 ಕಾನೂನುಗಳನ್ನು ಗುರುತಿಸಿದ್ದೇವೆ. ಇವುಗಳಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ 1,450 ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಆದರೆ, ಅಂತಹ 75 ಕಾನೂನುಗಳನ್ನು ಮಾತ್ರ ರಾಜ್ಯಗಳು ರದ್ದುಪಡಿಸಿವೆ ಎಂದು ಅವರು ಹೇಳಿದರು.