ಬೆಂಗಳೂರು : ನಾವು ಜೋರಾಗಿ ಅಧಿಕಾರ ಚಲಾಯಿಸಿದರೆ ಡಿ.ಕೆ.ಶಿವಕುಮಾರ್ ಉಸಿರು ನಿಂತು ಹೋಗುತ್ತದೆ ಅಂತ ಸಿಎಂ ಹೇಳಿದ್ದಾರೆ. ಇದರಿಂದ ನನಗೂ ಸಹ ಭಯವಾಗುತ್ತಿದೆ. ಮತ್ತೊಂದೆಡೆ ಮುಖ್ಯಮಂತ್ರಿಗಳ ಮುಂದೆಯೇ ಉಸ್ತುವಾರಿ ಸಚಿವರು ಗಂಡಸರು ಯಾರಿದ್ದಾರೆ ಅಂತ ಕೇಳಿದ್ದರು. ಅವರೊಬ್ಬರೇ ಗಂಡಸರು. ರಾಮನಗರದಲ್ಲಿ ಗಂಡಸರಿಲ್ಲ ನಾವೆಲ್ಲಾ ಹೆಂಗಸರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಬಂದಿರುವ ಮಾಹಿತಿ ಪ್ರಕಾರ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸಚಿವರ ತಮ್ಮ ಅಂತಾ ಅಲ್ಲ, ಸಚಿವರ ಸಂಬಂಧಿ ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಗಿದೆ. ಇದು ಸತ್ಯವಿರಬಹುದು, ಇಲ್ಲದಿರಬಹುದು. ನನಗೆ ಸಾಕಷ್ಟು ಕರೆಗಳು ಬರುತ್ತಿದ್ದು, ಆಯ್ಕೆಯಾಗಿದ್ದ ಅಭ್ಯರ್ಥಿ ತಂದೆ ಈ ರೀತಿ ಆಯ್ತಲ್ಲಾ ಎಂದು ಹಾಸಿಗೆ ಹಿಡಿದಿದ್ದಾರೆ. ಮತ್ತೊಬ್ಬರನ್ನು ಪ್ರಭಾವಿ ವ್ಯಕ್ತಿಗಳ ಪ್ರಭಾವ ಬಳಸಿ ಪೊಲೀಸರ ತನಿಖೆಯಿಂದ ಬಿಡಿಸಲಾಗಿದೆ. ಆ ಪ್ರಭಾವ ಬೀರಿದವರು ಯಾರು ಎಂಬುದು ನನಗೆ ಗೊತ್ತಿಲ್ಲ. ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.
ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸಿಎಂ ನಿಸ್ಪಕ್ಷಪಾತವಾಗಿ ತನಿಖೆ ನಡೆಸಲು ಮುಂದಾಗಬೇಕು. ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಬೊಮ್ಮಾಯಿ ಅವರು ಭಾಗಿಯಾಗಿದ್ದಾರೆ ಅಂತ ನಾನು ಹೇಳಲ್ಲ. ಸಿಎಂ ಬೊಮ್ಮಾಯಿ ಅವರ ಕಾಲದಲ್ಲಿ ಈ ಅಕ್ರಮ ನಡೆದಿಲ್ಲ. ಅದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಸಿಎಂ ಅವರು ಸಚಿವರ ರಕ್ಷಣೆ ಮಾಡಬಾರದು. ಯಾರೇ ಇರಲಿ. ಎಷ್ಟೇ ದೊಡ್ಡವರಾಗಿರಲಿ ನಿಷ್ಪಕ್ಷಪಾತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಸರ್ಕಾರ ತನಿಖೆ ಮಾಡಿ ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಪ್ರಕಟಿಸುವ ಮುನ್ನವೇ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶಿಸಿದ್ದಾರೆ. ಈ ನಿರ್ಧಾರದ ಮೂಲಕ ಸರ್ಕಾರ ಕಾನೂನು ವ್ಯಾಜ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಜತೆಗೆ ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರವಿದೆ. ಪೊಲೀಸ್ ಮಹಾನಿರ್ದೇಶಕರು, ಗೃಹ ಸಚಿವರ ಹೇಳಿಕೆಗಳು ಭಿನ್ನವಾಗಿರುವುದು ಉತ್ತಮ ಆಡಳಿತವೇ? ಯಾರೋ ಕರೆ ಮಾಡಿದರು ಎಂದು ವಿಚಾರಣೆ ಮಾಡದೇ ಆರೋಪಿಗಳನ್ನು ಬಿಟ್ಟು ಕಳುಹಿಸುವುದು ಎಷ್ಟು ಸರಿ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.










