ಬೆಂಗಳೂರು : ರಂಜಾನ್ ಹಬ್ಬದ ಕಾರಣ ಇಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಗರದ ಪೂರ್ವ ಸಂಚಾರ ವಿಭಾಗದ ವ್ಯಾಪ್ತಿಯ ಕೆಲವು ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಹಾಗೆಯೇ ಇಂದು ಸಂಜೆ ಖೇಲೋ ಇಂಡಿಯಾ ಸಮಾರೋಪ ಸಮಾರಂಭ ನಡೆಯಲಿರುವ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣ ಸುತ್ತಮುತ್ತ ಇರುವ ರಸ್ತೆಯ ಬದಲು ಪರ್ಯಾಯ ರಸ್ತೆಯನ್ನು ಬಳಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಕಸ್ತೂರ್ಬಾ ರಸ್ತೆ, ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ, ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ಜಂಕ್ಷನ್ ವರೆಗೆ, ಆರ್.ಆರ್.ಎಂ.ಆರ್. ರಸ್ತೆ, ಆರ್.ಆರ್.ಎಂ.ಆರ್. ಜಂಕ್ಷನ್ ನಿಂದ ಹಡ್ಸನ್ ವೃತ್ತದವರೆಗೆ, ಎನ್.ಆರ್. ರಸ್ತೆ, ಕೆ.ಜಿ.ರಸ್ತೆ, ನೃಪತುಂಗ ರಸ್ತೆ, ಹಳೇ ಅಂಚೆ ಕಛೇರಿ ರಸ್ತೆ, ಬಿ.ಆರ್.ಅಂಬೇಡ್ಕರ್ ರಸ್ತೆ, ರಾಜಭವನ ರಸ್ತೆ, ದೇವರಾಜ್ ಅರಸ್ ರಸ್ತೆ, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಟಿ.ಚೌಡಯ್ಯ ರಸ್ತೆ, ಟೆಂಪಲ್ ಸ್ಟ್ರೀಟ್ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಇನ್ನೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದು, ನಗರದ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಏರ್ ಪೋರ್ಟ್ ಮೂಲಕ ಹಲವು ಗಣ್ಯರು ಆಗಮಿಸುವ ಹಿನ್ನಲೆ ಏರ್ ಪೋರ್ಟ್ ರಸ್ತೆಯಲ್ಲಿ ವಾಹನಗಳ ದಟ್ಟನೆ ಇರುವುದರಿಂದ ಬದಲಿ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ಪ್ರಯಾಣಿಕರಲ್ಲಿ ಮಾನವಿ ಮಾಡಿದ್ದಾರೆ.










