ಬೆಂಗಳೂರು : ಬಿಎಂಟಿಸಿ ನೌಕರರೊಬ್ಬರು ದಯಾಮರಣ ಕೋರಿ ದೇಶದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನ ಬಿಎಂಟಿಸಿ ಬಸ್ ಡ್ರೈವರ್ ಶಂಬುಲಿಂಗಯ್ಯ ಚಿಕ್ಕಮಠ ಎಂಬುವವರು ಪತ್ರ ಬರೆದಿರುವವರು. ನಾನು, ನನ್ನ ಹೆಂಡತಿ ಹಾಗೂ ಮಕ್ಕಳು ಸಾಯಬೇಕಾಗಿದೆ. ದಯವಿಟ್ಟು ಅದಕ್ಕೆ ಅವಕಾಶ ನೀಡಿ ಅಂತ ಪತ್ರದಲ್ಲಿ ಮನವಿ ಮಾಡಿದ್ದಾರೆ.

ನಾನು ಈ ಹಿಂದೆ ಬಿಎಂಟಿಸಿ ಮುಷ್ಕರದಲ್ಲಿ ಭಾಗಿಯಾಗಿರಲಿಲ್ಲ. ಆದರೂ ಬಿಎಂಟಿಸಿ ಅಧಿಕಾರಿಗಳು ನನ್ನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಒಂದು ವರ್ಷದಿಂದ ಮಾಡಲು ಕೆಲಸವಿಲ್ಲ, ಬದುಕಲು ದಿಕ್ಕೇ ಇಲ್ಲ. ತಿನ್ನಲು ಅನ್ನವಿಲ್ಲ. ಮನೆ ಬಾಡಿಗೆ ಕಟ್ಟಲು ಆಗ್ತಿಲ್ಲ. ಇದರಿಂದ ನಮ್ಮ ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಹಾಗಾಗಿ ನನಗೆ ಮತ್ತು ನನ್ನ ಹೆಂಡತಿ ಮಕ್ಕಳಿಗೆ ದಯಾ ಮರಣ ಕೊಡಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪ್ರತಿಭಟನೆಗೆ ಕರೆ ಕೊಟ್ಟವರನ್ನು ಮತ್ತು ಭಾಗಿಯಾದವರನ್ನು ಮಾತ್ರ ಬಿಎಂಟಿಸಿ ಮೇಲಾಧಿಕಾರಿಗಳು ಪುನಃ ಕೆಲಸಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಈಗಾಗಲೇ ವಜಾಗೊಂಡ ಐದರಿಂದ ಹತ್ತು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ರಾಜ್ಯ ಸರ್ಕಾರ ವಜಾಗೊಂಡ ನೌಕರರಿಗೆ ಮತ್ತೆ ಕೆಲಸ ನೀಡುತ್ತಿಲ್ಲ. ಹೀಗಾಗಿ ನನಗೆ ಅನ್ಯಾಯವಾಗಿದೆ ದಯಾಮರಣ ಕೊಡಿ ಎಂದು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.










