ಧ್ವನಿವರ್ಧಕ ಬಳಕೆ ; ಸರ್ಕಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಏನಿದೆ?

53
firstsuddi

ಬೆಂಗಳೂರು : ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ಬಗ್ಗೆ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ನಿನ್ನೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಗೃಹ ಇಲಾಖೆ ಡಿಜಿ ಮತ್ತು ಐಜಿಪಿ ಅವರೊಂದಿಗೆ ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ತಕ್ಷಣ ಆದೇಶ ಹೊರಡಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆ ರಾಜ್ಯ ಸರ್ಕಾರ ಧ್ವನಿ ವರ್ಧಕಗಳ ಬಳಕೆ ಸಂಬಂಧ ಮಾನದಂಡಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.

ಧ್ವನಿವರ್ಧಕಗಳು ಅಥವಾ ಸಾರ್ವಜನಿಕ ಸ್ಥಳದಲ್ಲಿ ವ್ಯವಸ್ಥೆಯನ್ನು ಬಳಸುವ ಎಲ್ಲಾ ಬಳಕೆದಾರರು 15 ದಿನಗಳೊಳಗೆ ಗೊತ್ತುಪಡಿಸಿದ ಪ್ರಾಧಿಕಾರದಿಂದ ಲಿಖಿತ ಅನುಮತಿಯನ್ನು ಪಡೆಯಬೇಕು. 15 ದಿನದೊಳಗೆ ಅನುಮತಿ ಪಡೆಯದೇ ಇದ್ದರೆ, ಸ್ವಯಂ ಪ್ರೇರಿತವಾಗಿ ಲೌಡ್ ಸ್ಪೀಕರ್ಗಳನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ 15 ದಿನಗಳ ಬಳಿಕ ಅಧಿಕಾರಿಗಳು ಲೌಡ್ ಸ್ಪೀಕರ್ ತೆರವು ಮಾಡಲಿದ್ದಾರೆ.

ಡಿಜಿಪಿ, ಪೊಲೀಸ್ ಆಯುಕ್ತರು, ಡಿವೈಎಸ್ ಪಿ ದರ್ಜೆಗಿಂತ ಮೇಲ್ಪಟ್ಟ ಗೃಹ ಇಲಾಖೆಯ ಅಧಿಕಾರಿಗಳು ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಲಿಖಿತ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಸುವಂತಿಲ್ಲ. ರಾತ್ರಿ ಸಮಯದಲ್ಲಿ ಲೌಡ್ ಸ್ಪೀಕರ್ ಬಳಸುವಂತಿಲ್ಲ. ಒಳಾಗಂಣದಲ್ಲಿ ಮಾತ್ರ ಬಳಸಬಹುದಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾತ್ರಿ ಸಮಯದಲ್ಲಿ ಯಾರೂ ಡ್ರಮ್, ಟಾಂಟಾಂ, ಊದುವುದನ್ನು ಮಾಡುವಂತಿಲ್ಲ. ವಸತಿ ಪ್ರದೇಶಗಳಲ್ಲಿ ರಾತ್ರಿ ಸಮಯ ವಾಹನಗಳು ಹಾರ್ನ್ ಹಾಕುವಹಾಗಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವ ಸಂಬಂಧ ಅರಣ್ಯ ಹಾಗೂ ಪರಿಸರ ಇಲಾಖೆ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರಂತೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ (ಬೆಳಗಿನ ಸಮಯ), ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ (ರಾತ್ರಿ ಸಮಯ) ನಿಗದಿತ ಡೆಸಿಬಲ್ ನಲ್ಲಿ ಲೌಡ್ ಸ್ಪೀಕರ್ ಬಳಸಲು ಸೂಚಿಸಲಾಗಿದೆ.

ಶಬ್ಧ ಪ್ರಮಾಣ ಎಲ್ಲಿ ಎಷ್ಟಿರಬೇಕು?
• ಸಾರ್ವಜನಿಕ ಸ್ಥಳ – 10 ರಿಂದ 75 ಡೆಸಿಬಲ್
• ಖಾಸಗಿ ಸ್ಥಳ – 5 ಡೆಸಿಬಲ್ (ಸ್ವಂತ ಸೌಂಡ್ ಸಿಸ್ಟಂಗಳ ಬಳಕೆ)
• ಕೈಗಾರಿಕಾ ಪ್ರದೇಶ – ಹಗಲು 75 ಡೆಸಿಬಲ್, ರಾತ್ರಿ 70 ಡೆಸಿಬಲ್
• ವಾಣಿಜ್ಯ ಚಟುವಟಿಕೆ ಪ್ರದೇಶ – ಹಗಲು 65 ಡೆಸಿಬಲ್, ರಾತ್ರಿ 60 ಡೆಸಿಬಲ್
• ಜನವಸತಿ ಪ್ರದೇಶ – ಹಗಲು 55 ಡೆಸಿಬಲ್, ರಾತ್ರಿ 45 ಡೆಸಿಬಲ್
• ನಿಶ್ಯಬ್ಧ ವಲಯ – ಹಗಲು 50 ಡೆಸಿಬಲ್, ರಾತ್ರಿ 40 ಡೆಸಿಬಲ್