ಬುದ್ದನ ತತ್ವ, ಸಂದೇಶಗಳು ಇಂದಿಗೂ ಪ್ರಸ್ತುತ : ಕೆ.ಟಿ.ರಾಧಾಕೃಷ್ಣ.

78
firstsuddi

ಚಿಕ್ಕಮಗಳೂರು : ಭಗವಾನ್ ಬುದ್ದನ ತತ್ವ ಮತ್ತು ಸಂದೇಶಗಳು ಸಾರ್ವಕಾಲಿಕ ಸತ್ಯಗಳು, ಅವು ಇಂದಿಗೂ ಪ್ರಸ್ತುತವಾಗಿವೆ ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು. ನಗರದ ಬಹುಜನ ಸಮಾಜ ಪಕ್ಷದ ಕಛೇರಿಯಲ್ಲಿ ನಿನ್ನೆ ನಡೆದ ಬುದ್ದ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬುದ್ದನ ಚಿಂತನೆ, ತತ್ವಗಳು ಮತ್ತು ಸಂದೇಶಗಳು ಹಿಂದೆಂದಿಗಿಂತಲೂ ಇಂದು ಜಗತ್ತಿಗೆ ಅಗತ್ಯವಾಗಿವೆ ಸಾಮರಸ್ಯದ ಬದುಕಿಗೆ ಅವು ಸಹಕಾರಿಯಾಗಿವೆ ಅವುಗಳನ್ನು ಎಲ್ಲರೂ ರಾಜಿರಹಿತವಾಗಿ ಒಪ್ಪಿಕೊಳ್ಳಬೇಕು ಮತ್ತು ಅಪ್ಪಿಕೊಳ್ಳಬೇಕು ಹಾಗಾದಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯತೆ ಬೆಳೆಯುತ್ತದೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ ಬುದ್ದನ ಆದರ್ಶ, ತತ್ವಗಳು ಮತ್ತು ಸಂದೇಶಗಳು ಸರಳ ಮತ್ತು ನೆಮ್ಮದಿಯ ಬದುಕಿಗೆ ಅತ್ಯಗತ್ಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್ ಬುದ್ದನ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸಮಾರಂಭದಲ್ಲಿ ಬುದ್ದನ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಲಾಯಿತು. ಬುದ್ದನ ಅಷ್ಟಾಂಗ ಮಾರ್ಗಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು.

ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಅಧ್ಯಕ್ಷತೆ ವಹಿಸಿದ್ದರು.ಪಕ್ಷದ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ್, ನವೀನ್, ಸೋಮಶೇಖರ್, ಕೆ.ಎಸ್.ಮಂಜುಳಾ ಉಪಸ್ಥಿತರಿದ್ದರು.