ನಾಗ್ಪುರ : ಜ್ಯಾನವಾಪಿ ಮಸೀದಿ ವಿವಾದದ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮಹತ್ವದ ಹೇಳಿಕೆಯೊಂದನ್ನ ನೀಡಿದ್ದಾರೆ. ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಮತ್ತು ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದಿದ್ದಾರೆ.
ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೇ ವರ್ಷದ ಅಧಿಕಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಗಳವನ್ನು ಏಕೆ ಹೆಚ್ಚಿಸಬೇಕು. ನಾವು ಪ್ರತಿದಿನ ಹೊಸ ವಿಷಯವನ್ನು ಹೊರ ತರಬಾರದು. ಹಿಂದೂ ಹಾಗೂ ಮುಸ್ಲಿಮರು ಮಾತುಕತೆ ಮೂಲಕ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಆದರೆ ಇದು ಎಲ್ಲ ಸಮಯದಲ್ಲೂ ಸಾಧ್ಯವಾಗಲಾರದು. ಹೀಗಾಗಿ ಕೋರ್ಟ್ ನಲ್ಲಾದರೂ ತೀರ್ಪು ಬಂದಾಗ ಸ್ವೀಕಾರ ಮಾಡಬೇಕು ಎಂದು ತಿಳಿಸಿದರು.
ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಪೂರ್ವದಲ್ಲಿ ಅವರು ಹಿಂದೂಗಳೇ ಆಗಿದ್ದರು ಎಂದು ಹೇಳಿದರು. ಇತಿಹಾಸವನ್ನು ನಾವು ರಚನೆ ಮಾಡಿಲ್ಲ. ಇಂದಿನ ಹಿಂದೂ-ಮುಸ್ಲಿಮರೂ ರಚಿಸಿಲ್ಲ. ಭಾರತದ ಮೇಲೆ ಇಸ್ಲಾಂ ರಾಜರು ದಂಡಯಾತ್ರೆ ಕೈಗೊಂಡಾಗ ಜ್ಞಾನವಾಪಿಯಂತಹ ಘಟನೆಗಳು ನಡೆದಿವೆ. ನೂರಾರು ದೇವಸ್ಥಾನಗಳು ನಾಶವಾಗಿವೆ. ಹೀಗಾಗಿ ದಿನಕ್ಕೊಂದು ಹೊಸ ವಿವಾದವನ್ನು ಯಾಕೆ ಸೃಷ್ಟಿ ಮಾಡಬೇಕು? ಎಲ್ಲ ಮಸೀದಿಗಳಲ್ಲೂ ಯಾಕೆ ಶಿವಲಿಂಗವನ್ನು ಹುಡುಕಬೇಕು ಎಂದು ಪ್ರಶ್ನಿಸಿದರು.










