ತಿರುವನಂತಪುರಂ : ಕೇರಳದ ತಿರುವನಂತಪುರಂನ ವಿಝಿಂಜಂ ಪ್ರದೇಶದಲ್ಲಿ ಎರಡು ಮಕ್ಕಳಿಗೆ ನೊರೊವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ.
ವಿಝಿಂಜಂ ಪ್ರದೇಶದಲ್ಲಿ 2 ಮಕ್ಕಳಿಗೆ ನೊರೊವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರನ್ನು ನಿಗಾದಲ್ಲಿ ಇರಿಸಲಾಗಿದೆ. ಈ ಹೊಸ ವೈರಸ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಪರಿಸ್ಥಿತಿ ಅವಲೋಕಿಸಿದೆ. ಪ್ರದೇಶದಿಂದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲಾಗಿದ್ದು, ಸರ್ಕಾರ ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಂಡಿದೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ನೊರೊ ವೈರಸ್ ಎಂದರೇನು?
ನೊರೊವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್, ಕಲುಷಿತ ಸ್ಥಳಗಳ ಸಂಪರ್ಕಕ್ಕೆ ಬರುವ ಮೂಲಕ ಅಥವಾ ಕಲುಷಿತ ಆಹಾರವನ್ನು ಸೇವಿಸುವುದರಿಂದ ಈ ವೈರಸ್ ಹರಡಬಹುದು. ಅಲ್ಲದೆ, ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದು. ಇದು ಜಠರದ ಕಾಯಿಲೆಗೆ ಕಾರಣವಾಗುತ್ತದೆ.
ನೊರೊ ವೈರಸ್ ಲಕ್ಷಣಗಳೇನು?
ಅತಿಸಾರ, ವಾಂತಿ, ವಾಕರಿಕೆ ಮತ್ತು ಹೊಟ್ಟೆಯ ಅಸ್ವಸ್ಥತೆಗಳು ನೊರೊ ವೈರಸ್ ನ ಸಾಮಾನ್ಯ ಲಕ್ಷಣಗಳಾಗಿವೆ. ಜ್ವರ, ತಲೆನೋವು ಮತ್ತು ದೇಹದ ನೋವುಗಳು ಕೂಡ ಕಾಣಿಸಿಕೊಳ್ಳುತ್ತದೆ.










