ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಜಾತಿ ನಿಂದನೆ ಆರೋಪ ಕೇಳಿ ಬಂದಿದೆ. ಸಿದ್ದರಾಮಯ್ಯನವರು ನಾವು ಸದಾ ಅಸ್ಪೃಶ್ಯರು ಎಂದು ಹೇಳಿ, ನನ್ನ ಜಾತಿಗೆ ಅಪಮಾನ ಮಾಡಿದ್ದಾರೆ ಎಂದು ಪರಿಷತ್ ಸದಸ್ಯರೂ ಆಗಿರುವ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಟ್ವೀಟ್ ಮಾಡುವ ಭರದಲ್ಲಿ ನಾವು ಸದಾ ಅಸ್ಪೃಶ್ಯರು ಎಂದು ಹೇಳಿ, ನನ್ನ ಜಾತಿಗೆ ಅಪಮಾನ ಮಾಡಿದ್ದಾರೆ. ಇಂಥ ನಿಂದನೆಯ ಅಧಿಕಾರ ಅವರಿಗೆ ಇಲ್ಲ. ಎಸ್ ಸಿ, ಎಸ್ ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಿದ್ದೇನೆ. ಎಫ್ ಐಆರ್ ಫೈಲ್ ಮಾಡಿ ಬಂಧಿಸಲು ಒತ್ತಾಯಿಸಿದ್ದೇನೆ. ಅವರನ್ನು ಬಂಧಿಸುವಲ್ಲಿ ವಿಳಂಬ ಮಾಡಿದರೆ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ದಲಿತ ವಿರೋಧಿ, ಸಿದ್ದರಾಮಯ್ಯರ ದಲಿತ ವಿರೋಧಿ ಧೋರಣೆಗೆ ಸಾಕ್ಷಿಗಳಿವೆ. ದಲಿತ ಮಹಿಳೆ ಮೋಟಮ್ಮನವರು ತಮ್ಮ ಆತ್ಮಕಥೆ ಪುಸ್ತಕದಲ್ಲಿ ಸಿದ್ದರಾಮಯ್ಯನವರು ನನ್ನ ಎಲ್ಲ ಬೆಳವಣಿಗೆಗೂ ಬಾಗಿಲು ಹಾಕಿದರು ಎಂದು ಹೇಳಿದ್ದಾರೆ ಎಂದು ವಿವರಿಸಿದರು. ಕಾಂಗ್ರೆಸ್ ಮನಸ್ಥಿತಿ ದಲಿತ ವಿರೋಧಿ ಎಂಬುದು ಸಿದ್ದರಾಮಯ್ಯರ ಮೂಲಕ ವ್ಯಕ್ತವಾಗುತ್ತಿದೆ ಎಂದು ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.










