ಮಂಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದ 12 ವಿದ್ಯಾರ್ಥಿಗಳ ಬಂಧನ…

62
firstsuddi

ಮಂಗಳೂರು : ನಗರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ 12 ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶಾನೂಫ್ ಅಬ್ದುಲ್ ಗಫೂರ್(21), ಮುಹಮ್ಮದ್ ರಸೀನ್(22), ಗೋಕುಲ ಕೃಷ್ಣನ್(22), ಶಾರೂನ್ ಆನಂದ(19), ಅನಂತು ಕೆ.ಪಿ.(18), ಅಮಲ್(21), ಅಭಿಷೇಕ್(21), ನಿದಾಲ್(21), ಶಾಹೀದ್ ಎಂ.ಟಿ.ಪಿ.(22), ಫಹಾದ್ ಹಬೀಬ್(22), ಮುಹಮ್ಮದ್ ರಿಶಿನ್(22) ಹಾಗೂ ರಿಜಿನ್ ರಿಯಾಝ್(22) ಬಂಧಿತ ಆರೋಪಿಗಳಾಗಿದ್ದಾರೆ.

ನಗರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಹಾಗೂ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ ಐ ರಾಜೇಂದ್ರ ಬಿ ರವರ ನೇತ್ರತ್ವದ ಮಂಗಳೂರು ಸಿಸಿಬಿ ಪೊಲೀಸರು ನಗರದ ವೆಲೆನ್ಸಿಯಾ ಸೂಟರ್ ಪೇಟೆ 3 ನೇ ಕ್ರಾಸ್ ನ ವಸತಿ ಗೃಹವೊಂದರ ಮೇಲೆ ದಾಳಿ ನಡೆಸಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 900 ಗ್ರಾಂ ತೂಕದ ರೂ. 20 ಸಾವಿರ ಮೌಲ್ಯದ ಗಾಂಜಾ, ಗಾಂಜಾವನ್ನು ಸೇದುವ ಸ್ಮೋಕಿಂಗ್ ಪೈಪ್, ರೋಲಿಂಗ್ ಪೇಪರ್, 4,500 ರೂ ನಗದು, 11 ಮೊಬೈಲ್ ಫೋನ್ ಹಾಗೂ ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 2,85,000 ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಗಳನ್ನು ಮಾದಕ ವಸ್ತುಗಳ ಸೇವನೆ ಬಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, 11 ಮಂದಿ ಗಾಂಜಾವನ್ನು ಸೇವನೆ ಮಾಡಿರುವ ಬಗ್ಗೆ ದೃಢಪಟ್ಟಿದೆ. ಆರೋಪಿಗಳ ಪೈಕಿ 9 ಮಂದಿ ವಿದ್ಯಾರ್ಥಿಗಳು ಯೇನೆಪೋಯ ಕಾಲೇಜಿನ ಪದವಿ ವಿದ್ಯಾರ್ಥಿಗಳಾಗಿದ್ದು, 3 ಮಂದಿ ವಿದ್ಯಾರ್ಥಿಗಳು ಇಂದಿರಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.