ಚೆನ್ನೈ : ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಒ ಪನ್ನೀರಸೆಲ್ವಂ ಅವರನ್ನು ಉಚ್ಛಾಟನೆ ಮಾಡಲಾಗಿದೆ.
ಇಂದು ನಡೆದ ಎಐಎಡಿಎಂಕೆ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಕ್ರಮ ಕೈಗೊಳ್ಳುವಂತೆ ಜನರಲ್ ಕೌನ್ಸಿಲ್ ಸದಸ್ಯರು ಒತ್ತಾಯಿಸಿದ್ದರು. ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯನ್ನಾಗಿ(ಮುಖ್ಯಸ್ಥ) ನೇಮಿಸಲಾಗಿದೆ. ಜೊತೆಗೆ ಪ್ರತಿಸ್ಪರ್ಧಿ ನಾಯಕ ಒ ಪನ್ನೀರಸೆಲ್ವಂ ಅಥವಾ ಒಪಿಎಸ್ ಬಣವನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಹೊರಹಾಕಲಾಗಿದೆ. ಸಭೆಯಲ್ಲಿಂದು 16 ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ತಮಿಳುನಾಡಿನ ಚೆನ್ನೈನಲ್ಲಿ ಎಐಎಡಿಎಂಕೆ ಕಚೇರಿ ಎದುರು ಇಂದು ಮುಂಜಾನೆ ಹೈಡ್ರಾಮವೇ ನಡೆದಿದೆ. ಪಳನಿಸ್ವಾಮಿ ನೇತೃತ್ವದ ಬಣವು ನಿರ್ಣಾಯಕ ಜನರಲ್ ಕೌನ್ಸಿಲ್ ಸಭೆಯಲ್ಲಿ ಅವರನ್ನು ಸಂಘಟನೆಯ ಏಕೈಕ ನಾಯಕನನ್ನಾಗಿ ಆಯ್ಕೆ ಮಾಡಲು ಸಿದ್ಧರಾಗಿರುವ ಹಿನ್ನೆಲೆಯಲ್ಲಿ ಇಪಿಎಸ್, ಒಪಿಎಸ್ ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಜನರಲ್ ಕೌನ್ಸಿಲ್ ಸಭೆಗೂ ಮುನ್ನ ಎಐಡಿಎಂಕೆ ನಾಯಕರಾದ ಇ. ಪಳನಿಸ್ವಾಮಿ ಮತ್ತು ಓ. ಪನ್ನೀರ್ ಸೆಲ್ವಂ ಬೆಂಬಲಿಗರ ನಡುವೆ ಪಕ್ಷದ ಪ್ರಧಾನ ಕಚೇರಿ ಬಳಿ ಘರ್ಷಣೆ ಉಂಟಾಗಿದೆ. ಅಷ್ಟೇ ಅಲ್ಲದೇ ಒ ಪನ್ನೀರಸೆಲ್ವಂ ಬೆಂಬಲಿಗರು ಎಐಎಡಿಎಂಕೆ ಕಚೇರಿಯ ಬಾಗಿಲನ್ನು ಒಡೆದಿದ್ದಾರೆ. ಒಪಿಎಸ್ ಮತ್ತು ಇಪಿಎಸ್ ಬೆಂಬಲಿಗರು ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಸುಟ್ಟು ಹಾಕಿದರು.










