ಕೆನಡಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ…

74
firstsuddi

ಒಟ್ಟೋವಾ : ಕೆನಡಾದ ರಿಚ್ ಮಂಡ್ ಹಿಲ್ ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ.

ಕೆನಡಾದಲ್ಲಿರುವ ಯೋಂಗ್ ಸ್ಟ್ರೀಟ್ ಮತ್ತು ಗಾರ್ಡನ್ ಅವೆನ್ಯೂ ಪ್ರದೇಶದಲ್ಲಿನ ವಿಷ್ಣು ಮಂದಿರದಲ್ಲಿ ಪ್ರತಿಮೆಗಳನ್ನು ದ್ವಂಸಗೊಳಿಸಲಾಗಿದೆ. ಜೊತೆಗೆ ಮಹಾತ್ಮ ಗಾಂಧಿ ಪ್ರತಿಮೆಯ ಕೆಳಗೆ ಅತ್ಯಾಚಾರಿ ಮತ್ತು ಖಲಿಸ್ತಾನ್ ಎಂಬ ಆಕ್ಷೇಪಾರ್ಹ ಪದಗಳನ್ನು ಬರೆದು ಹಾನಿಗೊಳಿಸಿದ್ದಾರೆ. ಈ ಬಗ್ಗೆ ಭಾರತವು ತೀವ್ರ ದುಃಖ ವ್ಯಕ್ತಪಡಿಸಿದ್ದು, ಈ ಕೃತ್ಯವೆಸಗಿದವರ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ರಿಚ್ ಮಂಡ್ ಹಿಲ್ ನಲ್ಲಿರುವ ವಿಷ್ಣು ದೇವಾಲಯದಲ್ಲಿ ಪ್ರತಿಮೆಯನ್ನು ವಿರೂಪಗೊಳಿಸಿ, ಮಹಾತ್ಮ ಗಾಂಧಿ ಪ್ರತಿಮೆಯನ್ನು ಅವಮಾನಗೊಳಿಸಿದ್ದಾರೆ. ಈ ಕ್ರಿಮಿನಲ್ ಹಾಗೂ ದ್ವೇಷಪೂರಿತ ವಿಧ್ವಂಸಕ ಕೃತ್ಯವು ಕೆನಡಾದ ಭಾರತೀಯ ಸಮೂದಾಯದ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಟ್ವೀಟ್ ಮಾಡಿದ್ದಾರೆ.

ಯಾವುದೇ ರೀತಿಯ ದ್ವೇಷ-ಪೂರ್ವಾಗ್ರಹ ಪೀಡಿತ ಘಟನೆಯನ್ನು ಸಹಿಸುವುದಿಲ್ಲ ಎಂದು ಹೇಳಿರುವ ಯಾರ್ಕ್ ಪ್ರಾದೇಶಿಕ ಪೊಲೀಸರು, ‘ಜನಾಂಗ, ರಾಷ್ಟ್ರೀಯತೆ, ಭಾಷೆ, ಬಣ್ಣ, ಧರ್ಮ, ವಯಸ್ಸು, ಲಿಂಗದ ಆಧಾರದ ಮೇಲೆ ಇತರರಿಗೆ ನೋವನ್ನು ಉಂಟುಮಾಡುವವರ ವಿರುದ್ಧ ಗರಿಷ್ಠ ಪ್ರಮಾಣದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.