ಬೆಂಗಳೂರು: ಆನೆಯನ್ನು ಕೊಂದು ದಂತ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಆರೋಪಿಗಳನ್ನು ಸಂಸದ ಪ್ರಜ್ವಲ್ ರೇವಣ್ಣ ರಕ್ಷಿಸಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ಸಂಸದೆ, ಪ್ರಾಣಿಗಳ ಹಕ್ಕು ಹೋರಾಟಗಾರ್ತಿ ಮನೇಕಾ ಗಾಂಧಿ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದು, ಈ ಪ್ರಕರಣದಲ್ಲಿ ತಕ್ಷಣ ಮಧ್ಯಪ್ರವೇಶ ಮಾಡಿ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಡೆಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಹಾಸನ ತಾಲ್ಲೂಕಿನ, ವೀರಾಪುರ ಗ್ರಾಮದಲ್ಲಿ ಚಂದ್ರೆಗೌಡ ಎಂಬಾತ ಆನೆಗೆ ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಿ ದಂತ ತೆಗೆದು ಬಳಿಕ ಹೂತು ಹಾಕಿದ್ದರು. ಮಾರ್ಚ್ 19 ರಂದು ದಂತ ಮಾರಾಟ ಮಾಡುವ ವೇಳೆ ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಹಾಸನ ಅರಣ್ಯ ಇಲಾಖೆ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿತ್ತು.
ಆದರೆ ಆರೋಪಿಗಳ ರಕ್ಷಣೆಗೆ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಭಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಮನೇಕಾ ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕೇಸ್ ನಲ್ಲಿ ಆರೋಪಿಗಳ ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ ಆರ್.ಎಫ್.ಓ. ಪ್ರಯತ್ನ ಮಾಡಿದ್ದಾರೆ. ಪದೇ ಪದೆ ಕೇಸ್ ಅನ್ನು ವರ್ಗಾಯಿಸಲು ಸಿಕೆ ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಒತ್ತಡ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಜುಲೈ 18 ರಂದು ಪತ್ರ ಬರೆದಿರುವ ಸಂಸದೆ ಮನೇಕಾ ಗಾಂಧಿ, ಈ ಕೇಸ್ ನ ಆರೋಪಿಗಳು ಸಂಸದ ಪ್ರಜ್ವಲ್ ರೇವಣ್ಣ ಪಾರ್ಟಿಯ ಬೆಂಬಲಿಗರು ಎನ್ನುವ ಕಾರಣಕ್ಕೆ ಅವರ ಪರವಾಗಿ ಸಂಸದ ಪ್ರಜ್ವಲ್ ರೇವಣ್ಣ ಒತ್ತಡ ಹಾಕುತ್ತಿದ್ದಾರೆ ಪತ್ರದಲ್ಲಿ ಸಂಸದೆ ಮನೇಕಾ ಗಾಂಧಿ ದೂರಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕೂಡಲೇ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಸಮರ್ಪವಾಗಿ ತನಿಖೆ ನಡೆಸಲು ಅನುವು ಮಾಡಿಕೊಡುವಂತೆ ಅವರು ಒತ್ತಾಯಿಸಿದ್ದಾರೆ.










