ಬೆಂಗಳೂರು : ಬೆಂಗಳೂರಿನ ತಿಲಕ್ ನಗರದಲ್ಲಿ ವಾಸವಾಗಿದ್ದ ಅಸ್ಸಾಂ ಮೂಲದ ಶಂಕಿತ ಅಖ್ತರ್ ಹುಸೇನ್ ಲಷ್ಕರ್ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡದ ಮೂರನೇ ಮಹಡಿಯಲ್ಲಿ ನಾಲ್ವರ ಜೊತೆ ಅಖ್ತರ್ ವಾಸವಾಗಿದ್ದನು. ಈ ಕೋಣೆಯಲ್ಲಿ ವಾಸವಾಗಿದ್ದ ಎಲ್ಲರೂ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ರು. ಆದ್ರೆ ನಾಲ್ವರೂ ಸಹ ರಾತ್ರಿ ವೇಳೆ ಮಾತ್ರ ಓಡಾಟ ನಡೆಸುತ್ತಿದ್ದು, ಸ್ಥಳೀಯರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಶಂಕಿತ ಉಗ್ರನ ವಾಸ್ತವ್ಯ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಪೊಲೀಸರು ನಿನ್ನೆ ಸಂಜೆ ಐದು ಗಂಟೆಯಿಂದಲೇ ಮಫ್ತಿಯಲ್ಲಿದ್ದು, ಅಖ್ತರ್ ನಿವಾಸದ ಸುತ್ತಮುತ್ತವೇ ಮೊಕ್ಕಾಂ ಹೂಡಿದ್ದರು. ಸಂಜೆ ಏಳು ಗಂಟೆಗೆ ಅಖ್ತರ್ ರೂಮಿಗೆ ಬಂದಿದ್ದಾನೆ. ಕೆಲ ಹೊತ್ತಿನ ಬಳಿಕ ಸಿಸಿಬಿಯ 30ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ ಎಲ್ಲರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.










