ಪ್ರವೀಣ್ ಹತ್ಯೆಗೈದಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಬಿಎಸ್‍ಪಿ ಒತ್ತಾಯ…

84
firstsuddi

ಚಿಕ್ಕಮಗಳೂರು : ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆಗೈದಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಬಹುಜನ ಸಮಾಜಪಕ್ಷ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದ ಪಕ್ಷದ ಪದಾಧಿಕಾರಿಗಳು ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.

ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ದೇಶ ಮತ್ತು ರಾಜ್ಯದಲ್ಲಿ ಆಗಾಗ ಹತ್ಯೆ ಪ್ರಕರಣಗಳು ನಡೆಯುತ್ತಿವೆ, ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳು ಅವ್ಯಾಹತವಾಗಿವೆ ಎಂದರು.

ಸ್ವಲ್ಪ ದಿನಗಳ ಹಿಂದೆ ಮಂಗಳೂರಿನಲ್ಲಿ ಮಸೂದ್ ಎಂಬ ಯುವಕ ಕೊಲೆ, ಶಿವಮೊಗ್ಗದಲ್ಲಿ ಹರ್ಷ, ಧರ್ಮಸ್ಥಳದಲ್ಲಿ ದಲಿತ ಯುವಕನ ಕಗ್ಗೊಲೆ, ಹುಬ್ಬಳ್ಳಿಯಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಸೇರಿದಂತೆ ಸಾಲು ಸಾಲು ಹತ್ಯೆಗಳು ನಡೆಯುತ್ತಿವೆ ಎಂದು ಹೇಳಿದರು.

ಹತ್ಯೆಗಳಿಗೆ ಕಾರಣಕರ್ತರಾದ ಸಮಾಜಘಾತುಕ ಶಕ್ತಿಗಳಿಗೆ ಬಿಜೆಪಿ ಸರ್ಕಾರ ರಂಗವನ್ನು ಸಿದ್ದಪಡಿಸಿಕೊಟ್ಟಂತಿದೆ, ಭ್ರಷ್ಟಾಚಾರದಲ್ಲಿ ಜೈಲು ಪಾಲಾದ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದಿರುವ ಆರೋಪಿಗಳಿಗೆ ಜೈಲಿನಿಂದ ಹೊರಬಂದಾಗ ಹಾರತುರಾಯಿಗಳನ್ನು ಹಾಕಿ ಸ್ವಾಗತಿಸುತ್ತಿರುವುದು ಬಿಜೆಪಿಯ ಸಂಸ್ಕೃತಿಯಾಗಿದೆ ಎಂದು ಆರೋಪಿಸಿದರು.

ತಮ್ಮವರ ಹತ್ಯೆಯಾದಾಗ ಅಪರಾಧವೆನ್ನುವ ಬಿಜೆಪಿಯವರು ಬೇರೆಯವರ ಕೊಲೆಯಾದಾಗ ಅದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಖಂಡನೀಯ, ಇದರಿಂದಾಗಿ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ, ಸಮಾಜಘಾತಕ ಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವೀಣ್ ನೆಟ್ಟಾರು ಅವರ ಹತ್ಯೆಯ ಆರೋಪಗಳನ್ನು ಕೂಡಲೇ ಬಂಧಿಸಬೇಕು, ದುಷ್ರ್ಕಮಿಗಳು ಯಾವುದೇ ಧರ್ಮ ಅಥವಾ ಜಾತಿಯವರಾದರೂ ಬಿಡದೇ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಕಾರ್ಯದರ್ಶಿ ಕೆ.ಎಸ್.ಮಂಜುಳಾ, ಶೋಭಾ, ರೇಖಾ, ಹೊನ್ನಪ್ಪ, ವಿನೀತ್, ಜಗದೀಶ್ ಹಾಜರಿದ್ದರು.