ಸರ್ವಾಧಿಕಾರದ ವಿರುದ್ಧ ತಿರುಗಿಬಿದ್ದರೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸಲಾಗುತ್ತಿದೆ : ರಾಹುಲ್ ವಾಗ್ದಾಳಿ…

47
firstsuddi

ನವದೆಹಲಿ : ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಹತ್ಯೆ ನಡೆಯುತ್ತಿದೆ. 70 ವರ್ಷದಿಂದ ಕಟ್ಟಿದ ವ್ಯವಸ್ಥೆ 8 ವರ್ಷದಲ್ಲಿ ನಾಶವಾಗುತ್ತಿದೆ. ದೇಶದಲ್ಲಿ 4 ಜನರ ಸರ್ವಾಧಿಕಾರ ನಡೆಯುತ್ತಿದೆ. ಸರ್ವಾಧಿಕಾರದ ವಿರುದ್ಧ ತಿರುಗಿಬಿದ್ದರೆ ಸೇಡು ತೀರಿಸಿಕೊಳ್ಳಲಾಗುತ್ತಿದೆ. ಕೇಸ್ ಹಾಕಿ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಕಪ್ಪು ಪಟ್ಟಿ ಧರಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಲೆ ಏರಿಕೆ, ನಿರುದ್ಯೋಗ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಬಯಸುತ್ತಿದ್ದೇವೆ. ಆದರೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ನಾಲ್ಕೈದು ಉದ್ಯಮಿಗಳಿಗಾಗಿ ಇಬ್ಬರು ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಸಾವಿಗೆ ನಾವು ಸಾಕ್ಷಿಯಾಗಿದ್ದೇವೆ. ಸರ್ವಾಧಿಕಾರದ ಕಲ್ಪನೆಯ ವಿರುದ್ಧ ನಿಂತಿರುವ ಎ್ಲಲರನ್ನೂ ಕೆಟ್ಟದಾಗಿ ಹಲ್ಲೆ ನಡೆಸಿ, ಥಳಿಸಿ, ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಭಾರತ ಸರ್ವಾಧಿಕಾರದಲ್ಲಿದೆ, ಪ್ರಜಾಪ್ರಭುತ್ವ ಸತ್ತಿದೆ. ಇಂದು ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ, ನಮಗೆ ಮಾತನಾಡಲು ಅವಕಾಶವಿಲ್ಲ, ಪ್ರತಿಭಟನೆಗೆ ಅವಕಾಶವಿಲ್ಲ, ಲೋಕಸಭೆ ಮತ್ತು ರಾಜ್ಯಸಭೆಯಿಂದ ನಮ್ಮನ್ನು ಅಮಾನತುಗೊಳಿಸಲಾಗಿದೆ. ನಮ್ಮ ದೇಶವು ಸರ್ವಾಧಿಕಾರಿಗಳ ಹಿಡಿತದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಬಿಜೆಪಿಯ ಬೆದರಿಕೆ ತಂತ್ರವಾಗಿದೆ. ಬಿಜೆಪಿಯವರು ನಮ್ಮ ವಿರುದ್ಧ ಏನೇ ಷಡ್ಯಂತ್ರ ಮಾಡಿದರೂ ಯಾವುದೇ ವ್ಯತ್ಯಾಸವಾಗುವುದಿಲ್ಲ. ನಮ್ಮ ದೇಶ, ಅದರ ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೆಲಸವನ್ನು ನಾನು ಮುಂದುವರಿಸುತ್ತೇನೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಯುತ್ತಿದೆ.