ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ – ಮೂವರು ಯೋಧರು ಹುತಾತ್ಮ, ಇಬ್ಬರು ಉಗ್ರರು ಹತ…

49
firstsuddi

ಶ್ರೀನಗರ: ಜಮ್ಮು- ಕಾಶ್ಮೀರದ ರಾಜೌರಿಯಲ್ಲಿ ಇಂದು ಮುಂಜಾನೆ ನಡೆದ ಆತ್ಮಾಹುತಿ ದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಇದೇ ವೇಳೆ ಮೂವರು ವೀರಯೋಧರು ಹುತಾತ್ಮರಾಗಿದ್ದಾರೆ.

ರಾಜೌರಿಯ ದರ್ಹಾಲ್ ಪ್ರದೇಶದ ಪರ್ಗಲ್ ನಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ಉಗ್ರರು ದಾಟಲು ಪ್ರಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸೇನೆ, ಉಗ್ರರ ಮೇಲೆ ದಾಳಿ ನಡೆಸಿದೆ. ಈ ವೇಳೆ ಉಗ್ರರು ಮತ್ತು ಸೇನೆ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಸ್ಥಳದಲ್ಲೇ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ದುರಾದೃಷ್ಟವಶಾತ್ ಮೂವರು ಯೋಧರು ಹುತಾತ್ಮರಾದರು. ಅಲ್ಲದೇ, ಇನ್ನಿಬ್ಬರು ಗಾಯಗೊಂಡಿದ್ದು, ಓರ್ವ ಯೋಧನ ಸ್ಥಿತಿ ಗಂಭೀರವಾಗಿದೆ.

ರಾಜೌರಿಯಿಂದ 25 ಕಿಮೀ ದೂರದಲ್ಲಿ ಸೇನಾ ಕಂಪೆನಿ ಆಪರೇಟಿಂಗ್ ಬೇಸ್ ಮೇಲೆ ಇಬ್ಬರು ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಇಬ್ಬರೂ ಉಗ್ರರನ್ನು ಹತ್ಯೆ ಮಾಡಲಾಗಿದೆ. ನಮ್ಮ ಮೂವರು ಯೋಧರು ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬುದ್ಗಾಂನಲ್ಲಿ ನಿನ್ನೆ ಮೂವರು ಲಷ್ಕರ್ ಎ ತಯಬಾ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಅವರಲ್ಲಿ ಒಬ್ಬ ಉಗ್ರ, ನಾಗರಿಕರಾದ ರಾಹುಲ್ ಭಟ್ ಮತ್ತು ಅಮ್ರೀನ್ ಭಟ್ ಅವರ ಹತ್ಯೆಗಳಲ್ಲಿ ಭಾಗಿಯಾಗಿದ್ದ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.