ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ರಾಯರಲ್ಲಿ ಸಂಕಲ್ಪ ಮಾಡಿದ್ದೇನೆ : ಬಿ.ಎಸ್.ಯಡಿಯೂರಪ್ಪ.

55
firstsuddi

ರಾಯಚೂರು : ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಹಿನ್ನೆಲೆ ಪುತ್ರರಾದ ಸಂಸದ ರಾಘವೇಂದ್ರ, ವಿಜಯೇಂದ್ರ ಮತ್ತು ಸೊಸೆಯರ ಜೊತೆ ಕುಟುಂಬ ಸಮೇತವಾಗಿ ಇಂದು ಬೆಳಗ್ಗೆ ಶ್ರೀಮಠಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಯರ ದರ್ಶನ ಪಡೆದರು.

ರಾಯರ ದರ್ಶನ ಬಳಿಕ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶಿರ್ವಾದ ಪಡೆದರು. ಬಿಎಸ್‍ವೈ ಜೊತೆ ಶ್ರೀಗಳು ಮಾತುಕತೆ ನಡೆಸಿದರು. ಈ ವೇಳೆ, ಶ್ರೀಗಳು 2009 ರಲ್ಲಿ ಭೀಕರ ಪ್ರವಾಹ ಬಂದಿತ್ತು. ಅಂದು ಸಿಎಂ ಆಗಿದ್ದಾಗ ಸಾಕಷ್ಟು ಪರಿಹಾರ ನೀಡಿದ್ದೀರಿ. ಕರ್ನಾಟಕ ಹಾಗೂ ಮಂತ್ರಾಲಯ ಸಂಪರ್ಕ ಸೇತುವೆ ನಿರ್ಮಾಣ ಮಾಡಿದ್ದೀರಿ ಎಂದು ಗುಣಗಾನ ಮಾಡಿದರು. ಬಳಿಕ ಶ್ರೀಮಠ ಸನ್ಮಾನಿಸಿ ಗೌರವಿಸಿತು.

ರಾಯರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪವನ್ನು ರಾಯರಲ್ಲಿ ಮಾಡಿದ್ದೇನೆ. ಮಂತ್ರಾಲಯಕ್ಕೆ ಬಂದಾಗ ನನಗೆ, ನಮ್ಮ ಕುಟುಂಬಕ್ಕೆ ಪ್ರೇರಣೆ ಸಿಕ್ಕಿದೆ. ಈ ಭೇಟಿ ಉದ್ದೇಶವೇ ರಾಯರ ಆಶಿರ್ವಾದ ಪಡೆದು, ರಾಜ್ಯಾದ್ಯಂತ ಓಡಾಟ ಮಾಡಿ ಚುನಾವಣೆಯಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರೋದು. ನಮ್ಮ ಸಂಕಲ್ಪವನ್ನು ರಾಯರು ಈಡೇರಿಸುತ್ತಾರೆ ಎಂದರು.

ಸಿಎಂ ಬದಲಾವಣೆಗಳು ಕೇವಲ ಊಹಾಪೋಹವಷ್ಟೇ. ಸಿಎಂ ಬೊಮ್ಮಾಯಿ ಪೂರ್ಣಾವಧಿ ಇರುತ್ತಾರೆ. ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಯಡಿಯೂರಪ್ಪ ಅವರು ಹೇಳಿದರು.