ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ : ಸಚಿವ ಆರ್.ಅಶೋಕ್.

47
firstsuddi

ಬೆಂಗಳೂರು : ಸ್ವಾತಂತ್ರ್ಯ ದಿನದಂದು ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ ನಡೆಯಲಿದೆ, ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದರು.

ಈದ್ಗಾ ಮೈದಾನ ವಿವಾದ ಇತ್ಯರ್ಥ ಸಂಬಂಧ ಕಂದಾಯ ಸಚಿವ ಅಶೋಕ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸರ್ಕಾರದ ವತಿಯಿಂದಲೇ ಧ್ವಜಾರೋಹಣ ಮಾಡಲಾಗುತ್ತೆ. ಶಾಸಕ ಜಮೀರ್ ಸೇರಿದಂತೆ ಯಾವುದೇ ಸಂಘಟನೆಗಳಿಗೆ ಧ್ವಜ ಹಾರಿಸಲು ಅವಕಾಶ ನೀಡುವುದಿಲ್ಲ. ಜಿಲ್ಲಾಡಳಿತ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ಧ್ವಜಾರೋಹಣ ಮಾಡುತ್ತಾರೆ ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಶಿಷ್ಟಾಚಾರದ ಪ್ರಕಾರ ಆ ಭಾಗದ ಸಂಸದ, ಶಾಸಕರು ಭಾಗವಹಿಸಬಹುದು. ಭಾರತ್ ಮಾತಾಕೀ ಜೈ, ವಂದೇ ಮಾತರಂ ಬಿಟ್ಟರೆ ಬೇರೆ ಯಾವುದೇ ಘೋಷಣೆ ಕೂಗುವಂತಿಲ್ಲ. ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಹಿಂದೂ ಸಂಘಟನೆಗಳು ಗಣೇಶೋತ್ಸವ ಆಚರಣೆಗೆ ಅವಕಾಶ ಕೋರಿ ಸಲ್ಲಿಸಿದ್ದ ಮನವಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶೋಕ್, ಗಣೇಶೋತ್ಸವಕ್ಕೆ ಇನ್ನೂ ಸಮಯ ಇದೆ. ಆಗ ನಿರ್ಧಾರ ಮಾಡುತ್ತೇವೆ ಎಂದರು.