ಸ್ವಾತಂತ್ರ್ಯೋತ್ಸವದಂದೇ ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ – ರೈತರನ್ನು ವಶಕ್ಕೆ ಪಡೆದ ಪೊಲೀಸರು…

46
firstsuddi

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಭೂಸ್ವಾಧೀನ ವಿರೋಧಿಸಿ ರೈತರು ಸ್ವಾತಂತ್ರ್ಯೋತ್ಸವದ ದಿನದಂದೇ ತಿರಂಗ ಹಿಡಿದು ಪ್ರತಿಭಟನೆ ಮಾಡುತ್ತ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ವೇದಿಕೆಗೆ ನುಗ್ಗಲು ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಬಳಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಕೆಐಎಡಿಬಿ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಹೀಗಾಗಿ ಇಂದು ಸಹ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜ ಹಿಡಿದು ಮೌನ ಪ್ರತಿಭಟನೆ ನಡೆಸುವ ಮೂಲಕ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ವೇದಿಕೆಗೆ ನುಗ್ಗಲು ಯತ್ನಿಸಿದ್ದಾರೆ. ಆದರೆ ಇದಕ್ಕೆ ಅವಕಾಶ ಕೊಡದ ದೇವನಹಳ್ಳಿ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದಿದ್ದಾರೆ.

75 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ದೇವನಹಳ್ಳಿ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ ಸುಧಾಕರ್ ಧ್ವಜಾರೋಹಣ ನೆರವೇರಿಸಿದರು. ರೈತರ ಮುತ್ತಿಗೆ ಯತ್ನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಕೈಗಾರಿಕಾ ಇಲಾಖೆ ಸುತ್ತೋಲೆಗಳು ಏನು, ಯಾವ ಉದ್ದೇಶಕ್ಕೆ ಮಾಡಲಾಗುತ್ತಿದೆ. ಇವೆಲ್ಲಾ ಮಾಹಿತಿಯನ್ನ ನಾನು ತೆಗೆದುಕೊಂಡು ರೈತರ ಬಳಿ ಮಾತುಕತೆ ನಡೆಸುತ್ತೇನೆ. ಆದರೆ ಇವತ್ತು ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ರೈತರು ಈ ರೀತಿ ಮಾಡಿರೋದಕ್ಕೆ ನಾನು ಖೇದವನ್ನ ವ್ಯಕ್ತಪಡಿಸುತ್ತೇನೆ. ಇದು ಪುನರಾವರ್ತನೆ ಆಗಬಾರದು, ನಿಮಗೆ ಶೋಭೆ ತರುವಂತದಲ್ಲ ಅಂತಾ ಪ್ರತಿಭಟನೆ ಮಾಡಿದ ರೈತರ ವಿರುದ್ದ ಗರಂ ಆದರು.