ಪಣಜಿ : ಇತ್ತೀಚಿಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಿಜೆಪಿ ನಾಯಕಿ ಹಾಗು ನಟಿ ಸೋನಾಲಿ ಫೋಗಟ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಸೋನಾಲಿ ಫೋಗಟ್ ಸಾವಿಗೆ ಮಾದಕ ದ್ರವ್ಯ ಸೇವನೆಯೇ ಕಾರಣ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.
ಸೋನಾಲಿ ಫೋಗಟ್ ದೇಹದ ಮೇಲೆ ಅನೇಕ ಗಾಯದ ಗುರುತುಗಳಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಯಲಾಗಿದೆ. ಹೀಗಾಗಿ ಗೋವಾ ಪೊಲೀಸರು ಇದೊಂದು ಕೊಲೆ ಎಂಬ ತೀರ್ಮಾನಕ್ಕೆ ಬಂದಿದ್ದು, ನಿನ್ನೆ ಸೋನಾಲಿ ಅವರ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಸುಖ್ವಿಂದರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದರು.
ಸೋನಾಲಿ ಫೋಗಟ್ ಅವರು ಗೋವಾದ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡುತ್ತಿದ್ದಾಗ ಸಹಚರರು ಬಲವಂತವಾಗಿ ಮಾದಕ ದ್ರವ್ಯ ನೀಡಿದ್ದಾರೆ. ರೆಸ್ಟೋರೆಂಟ್ ನಿಂದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಇದು ತಿಳಿದುಬಂದಿದ್ದು, ಆರೋಪಿಗಳು ಸಹ ತಪ್ಪೊಪ್ಪಿಕೊಂಡಿದ್ದಾರೆ ಎಂದು ಐಜಿಪಿ ಓಂವಿರ್ ಸಿಂಗ್ ಬಿಷ್ಣೋಯ್ ಮಾಹಿತಿ ನೀಡಿದ್ದಾರೆ.
ಸೋನಾಲಿ ಪೋಗಟ್ (42) ಸೋಮವಾರ ರಾತ್ರಿ ಗೋವಾದಲ್ಲಿ ಮೃತಪಟ್ಟಿದ್ದರು. ಆರಂಭದಲ್ಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಆದರೆ, ಸೋನಾಲಿ ಫೋಗಟ್ ಅವರ ಸಹೋದರ ರಿಂಕು ಢಾಕಾ ಅವರು ತಮ್ಮ ಸಹೋದರಿಯನ್ನು ಆಕೆಯ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಅವರ ಸ್ನೇಹಿತ ಸುಖ್ವಿಂದರ್ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಜೊತೆಗೆ, ಗೋವಾ ಪೊಲೀಸರಿಗೆ ದೂರು ನೀಡಿದ್ದರು.










