ಅವಳಿ ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ.. ಆದರೆ ಅಪ್ಪ ಮಾತ್ರ ಬೇರೆ ಬೇರೆ..!

57
firstsuddi

ಬ್ರೆಸಿಲಿಯಾ : ಬ್ರೆಜಿಲ್ ನ ಗೋಯಾಸ್ ಪ್ರಾಂತ್ಯದ ಮಿನೆರೋಸ್ ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. 19 ವರ್ಷದ ಯುವತಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಇದೀಗ ಮಕ್ಕಳ ತಂದೆ ಬೇರೆ ಬೇರೆ ಎಂಬುದು ತಿಳಿದುಬಂದಿದೆ.

ಒಂದೇ ದಿನ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಯುವತಿ ಇಬ್ಬರಿಂದಲೂ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಯುವತಿ ತನ್ನ ಇಬ್ಬರೂ ಮಕ್ಕಳಿಗೆ ಹೋಲಿಕೆ ಇರಲಿಲ್ಲ. 8 ತಿಂಗಳ ಬಳಿಕ ತಂದೆ ಯಾರಿರಬಹುದು ಎಂಬುವುದರ ಬಗ್ಗೆ ಅನುಮಾನ ಮೂಡಲು ಆರಂಭವಾಯಿತು. ಹೀಗಾಗಿ ಎಂಟು ತಿಂಗಳ ಶಿಶುಗಳನ್ನು ಡಿಎನ್ ಎ ಪರೀಕ್ಷೆಗೆ ಒಳಪಡಿಸಿದಾಗ ಫಲಿತಾಂಶದಲ್ಲಿ ಒಂದು ಮಗು ಮಾತ್ರ ತಂದೆಯ ಹೋಲಿಕೆಯನ್ನು ಹೊಂದಿದೆ. ಅನುಮಾನದಿಂದ ಮತ್ತೆ ಪರೀಕ್ಷಿಸಿದಾಗಲೂ ಇದೇ ಫಲಿತಾಂಶ ಬಂದಿದೆ. ತನ್ನ ಇಬ್ಬರು ಮಕ್ಕಳು ವಿಭಿನ್ನ ವ್ಯಕ್ತಿಗಳಿಂದ ಜನಿಸಿರುವ ವಿಚಾರ ತಿಳಿದುಬಂದಿದ್ದು, ಈ ರೀತಿ ಆಗುತ್ತದೆ ಅಂತ ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾಳೆ.

ಈ ಕುರಿತಂತೆ ಯುವತಿಗೆ ಚಿಕಿತ್ಸೆ ನೀಡಿದ ವೈದ್ಯ ತುಲಿಯೊ ಜಾರ್ಜ್ ಫ್ರಾಂಕೊ ಅವರು ಪ್ರತಿಕ್ರಿಯಿಸಿ, ಈ ರೀತಿಯ ಪ್ರಕರಣಗಳು ಬಹಳ ಅಪರೂಪ. 10 ಲಕ್ಷದಲ್ಲಿ ಒಂದು ಪ್ರಕರಣ ಇಂತಹ ರೀತಿ ಇರುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೇ ಹೆಟೆರೊಪರೆಂಟಲ್ ಸೂಪರ್ ಫೆಕಂಡೇಶನ್ ಪ್ರಪಂಚದಾದ್ಯಂತ ಕೇವಲ 20 ಪ್ರಕರಣಗಳಿವೆ. ವಿವಿಧ ವ್ಯಕ್ತಿಗಳ ಅವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡುವ ಅತ್ಯಂತ ಅಪರೂಪದ ವಿದ್ಯಮಾನವಾಗಿದೆ ಎಂದು ಹೇಳಿದ್ದಾರೆ.