ಮೂಡಿಗೆರೆ : ಆನೆ ದಾಳಿಗೆ ಪ್ರಾಣ ಕಳೆದುಕೊಂಡಿರುವ ಘಟನೆ ಊರಬಗೆ ಗ್ರಾಮದಲ್ಲಿ ನಡೆದಿದೆ. ತೋಟದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕ ಅರ್ಜುನ್ ಎಂಬುವರ ಮೇಲೆ ಆನೆ ದಾಳಿ ಮಾಡಿದ್ದು 45 ವರ್ಷದ ಅರ್ಜುನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಲೂಕಿನ ಊರಬಗೆ, ಗೌಡಹಳ್ಳಿ ಭಾಗದಲ್ಲಿ ಐದು ಕಾಡಾನೆಗಳು ಬೀಡುಬಟ್ಟಿದ್ದು ಸ್ಥಳಿಯರು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಅರಣ್ಯ ಇಲಾಖೆಯೇ ಮಾಡಿದ ಕೊಲೆ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹಳ್ಳಿಯ ಮುಖ್ಯ ರಸ್ತೆ ಬಳಿಯೇ ಆನೆ ದಾಳಿ ಮಾಡಿರುವುದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ. ಕಳೆದ ಆಗಸ್ಟ್ 25ರಂದು ತಾಲೂಕಿನ ಹಾರ್ಗೋಡು ಗ್ರಾಮದ ಆನಂದ್ ದೇವಾಡಿಗ ಎಂಬುವರ ಮೇಲೆ ಆನೆ ದಾಳಿ ಮಾಡಿದ್ದು ಅವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನ ಆನೆ ಕಾಡಿನಲ್ಲಿ ಸುಮಾರು ಒಂದು ಕಿ.ಮೀ. ಎಳೆದುಕೊಂಡು ಹೋಗಿದ್ದ ಪರಿಣಾಮ ದೇಹದ ಅಂಗಾಂಗಗಳು ಕಾಡಿನಲ್ಲಿ ಚದುರಿ ಹೋಗಿದ್ದವು. ಇಂದು ಕೂಡ ತೋಟದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕನ ಮೇಲೆ ಆನೆ ದಾಳಿ ಮಾಡಿದ್ದು ಆತ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಿಯರು ಅರಣ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ಕಡಿದಾಳ್ ಅವರು ಮೊನ್ನೆ-ಮೊನ್ನೆಯಷ್ಟೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಎಲೆಮಡಿಲು ಗ್ರಾಮದಲ್ಲಿ ರೈತರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನ ವಾರಗಟ್ಟಲೇ ಕಷ್ಟಪಟ್ಟು ಐದು ಸಾಕಾನೆಗಳು ಸೆರೆ ಹಿಡಿದಿದ್ದವು. ಆದರೆ ಮೂಡಿಗೆರೆ ತಾಲೂಕಿನಲ್ಲಿ ಕಳೆದೊಂದು ದಶಕದಿಂದಲೂ ಆನೆ ಹಾವಳಿ ಮಿತಿ ಮೀರಿದೆ. ಸಾರಗೋಡು, ಗೌಡಹಳ್ಳಿ, ಕೋಗಿಲೆ, ಊರಬಗೆ, ಗುತ್ತಿಹಳ್ಳಿ, ಬೈರಾಪುರ, ದೇವವೃಂದ, ಸತ್ತಿಗನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಆನೆ ಹಾವಳಿ ಮೀತಿ ಮೀರಿದೆ. ಸ್ಥಳಿಯರು ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದಾಗ ಸ್ಥಳಕ್ಕೆ ಬಂದು ಪಟಾಕಿ ಹೊಡೆದಿದ್ದೇ ಅಧಿಕಾರಿಗಳ ಸಾಧನೆ ಎಂದು ಆರೋಪಿಸಿದ್ದಾರೆ. ಜನಪ್ರತಿನಿಧಿಗಳು ಎಚ್ಚೆತ್ತು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಒಂದೆಡೆ ಮಳೆಯಿಂದ ಬೆಳೆಯನ್ನು ಕಳೆದುಕೊಂಡಿದ್ದೇವೆ ಈಗ ಪ್ರಾಣಿಗಳು ಮನುಷ್ಯನ ಪ್ರಾಣವನ್ನೆ ತೆಗೆಯುತ್ತಿದ್ದೇವೆ ಇದೇ ತರ ಮುಂದುವರೆದರೆ ಮಲೆನಾಡಿಗರು ಬದುಕುವುದೇ ಕಷ್ಟ ಎಂದರು.










