ನವದೆಹಲಿ : ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನೂಪುರ್ ಶರ್ಮಾ ಅವರ ಹೇಳಿಕೆಯಿಂದ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ. ಹೀಗಾಗಿ, ಅವರನ್ನು ಬಂಧಿಸಲು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ, ಅರ್ಜಿಯನ್ನು ಹಿಂಪಡೆಯುವಂತೆ ಅರ್ಜಿದಾರರಿಗೆ ಸೂಚಿಸಿತು.
ಅರ್ಜಿಯು ತುಂಬಾ ಸರಳವಾಗಿ ಹಾಗೂ ನಿರುಪದ್ರವಿಯಾಗಿ ಕಾಣುತ್ತದೆ. ಆದರೆ ಈ ಅರ್ಜಿಯು ತುಂಬಾ ದೂರಗಾಮಿ ಪರಿಣಾಮಗಳನ್ನು ಹೊಂದಿದೆ. ಹೀಗಾಗಿ ಅರ್ಜಿಯನ್ನು ಹಿಂಪಡೆಯುವಂತೆ ಸಲಹೆ ನೀಡುತ್ತಿದ್ದೇವೆ. ಅರ್ಜಿ ಹಿಂಪಡೆಯಲಾಗಿದೆ ಎಂದು ಪರಿಗಣಿಸಿ ಅರ್ಜಿ ವಜಾಗೊಳಿಸಲಾಗಿದೆ ಎಂದು ಪೀಠ ಹೇಳಿತು.
ಮಾರ್ಚ್ 26ರಂದು ಪ್ರವಾದಿಯ ಕುರಿತು ನೂಪುರ್ ಶರ್ಮಾ ನೀಡಿದ್ದ ಹೇಳಿಕೆ ಈ ವರ್ಷದ ಆರಂಭದಲ್ಲಿ ರಾಷ್ಟ್ರದಾದ್ಯಂತ ಭಾರಿ ವಿವಾದ ಮತ್ತು ಹಿಂಸಾಚಾರವನ್ನು ಉಂಟುಮಾಡಿತ್ತು. ಹಲವಾರು ಮುಸ್ಲಿಂ ರಾಷ್ಟ್ರಗಳು ಪ್ರತಿಭಟನೆಯನ್ನು ಘೋಷಿಸಿದ್ದವು. ಇದರ ಬೆನ್ನಲ್ಲೇ ಬಿಜೆಪಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು.










