ಮುಂಬೈ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗುವ 5 ಸೆಕೆಂಡ್ ಗಳ ಮುನ್ನ ಬ್ರೇಕ್ ಹಾಕಲಾಗಿದೆ ಎಂದು ಐಷಾರಾಮಿ ಕಾರು ಮರ್ಸಿಡಿಸ್ ಕಂಪನಿ ಮುಂಬೈನ ಪಾಲ್ಘರ್ ಪೊಲೀಸರಿಗೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ತಿಳಿಸಿದೆ.
ಮರ್ಸಿಡಿಸ್ ಕಂಪನಿ ಸಲ್ಲಿಸಿದ ವರದಿಯಲ್ಲಿ, ಅಪಘಾತಕ್ಕೂ ಮುನ್ನ ಕಾರು 100 ಕಿ.ಮೀ ವೇಗದಲ್ಲಿತ್ತು. ಬಳಿಕ ಸೂರ್ಯ ನದಿ ಸೇತುವೆ ಮೇಲೆ ಬರುತ್ತಿದ್ದಂತೆ ವೇಗ 89 ಕಿ.ಮೀ ಇಳಿಕೆ ಕಂಡಿತ್ತು. ಅಪಘಾತಕ್ಕೂ 5 ಸೆಕೆಂಡ್ ಗೂ ಮುನ್ನ ಬ್ರೇಕ್ ಹಾಕಲಾಗಿತ್ತು. ಅಪಘಾತವಾಗುತ್ತಿದ್ದಂತೆ 4 ಏರ್ ಬ್ಯಾಗ್ ಗಳ ಪೈಕಿ 3 ಏರ್ ಬ್ಯಾಗ್ ಗಳು ತೆರೆದುಕೊಂಡಿತ್ತು ಎಂದು ತಿಳಿಸಿದೆ.
ಕಾರನ್ನು ಪರಿಶೀಲಿಸಲು ಮರ್ಸಿಡಿಸ್-ಬೆಂಜ್ ತಜ್ಞರ ತಂಡ ಹಾಂಗ್ ಕಾಂಗ್ ನಿಂದ ಮುಂಬೈಗೆ ಭೇಟಿ ನೀಡಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಜರ್ಮನ್ ವಾಹನ ತಯಾರಕ ಕಂಪನಿ, ಕಾರು ಅಪಘಾತದ ತನಿಖೆಯಲ್ಲಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಗ್ರಾಹಕರ ಗೌಪ್ಯತೆಯನ್ನು ಗೌರವಿಸುವುದಕ್ಕಾಗಿ ಅವರೊಂದಿಗೆ ಮಾತ್ರ ವರದಿಯ ವಿವರ ಹಂಚಿಕೊಳ್ಳುವುದಾಗಿ ತಿಳಿಸಿದೆ.
ಸೆಪ್ಟೆಂಬರ್ 4 ಭಾನುವಾರದಂದು ಗುಜರಾತ್ ನಿಂದ ಮುಂಬೈಗೆ ತೆರಳುತ್ತಿದ್ದಾಗ ಪಾಲ್ಘರ್ ನ ಚರೋತಿಯ ಸೂರ್ಯ ನದಿ ಸೇತುವೆ ಮೇಲೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಸೈರಸ್ ಮಿಸ್ತ್ರಿ (54) ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಅವರು ಸಾವನ್ನಪ್ಪಿದ್ದರು. ಕಾರನ್ನು ಓಡಿಸುತ್ತಿದ್ದ ಅನಹಿತಾ ಪಂಡೋಲೆ (55) ಮತ್ತು ಅವರ ಪತಿ ಡೇರಿಯಸ್ ಪಂಡೋಲೆ (60) ಅವರಿಗೆ ಗಾಯಗೊಳಗಾಗಿದ್ದು ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.










