ಹುಬ್ಬಳ್ಳಿ : ಉಮೇಶ ಕತ್ತಿಯವರು ಉತ್ತರ ಕರ್ನಾಟಕದ ರಾಜಕಾರಣಿ, ಅವರದ್ದೇ ಪಕ್ಷದ ಪ್ರಭಾವಿ ರಾಜಕಾರಣಿ. ಅವರ ನಿಧನದ ಹಿನ್ನೆಲೆ ಒಂದು ಕಡೆ ಶೋಕಾಚರಣೆ ಮಾಡ್ತೀವಿ ಅಂತಾರೆ ಇನ್ನೊಂದು ಕಡೆ ಡ್ಯಾನ್ಸ್ ಮಾಡ್ತಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಬಿಟ್ಟಿ ಹಣದಲ್ಲಿ ಮತ್ತು ಲಂಚದ ಹಣದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡ್ತಿದಾರೆ. ರಾಜ್ಯದಲ್ಲಿ ಮಳೆ ಬಂದು ಸಾಕಷ್ಟು ಸಮಸ್ಯೆ ಆಗಿದೆ. ಸುಮಾರು 7ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಂಗಳೂರಿನಲ್ಲೂ ಸಹ ಮಳೆಯಿಂದಾಗಿ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರೋ ಜನರಿಗೆ ಸ್ಪಂದನೆ ಮಾಡೋದು ಬಿಟ್ಟು ಡ್ಯಾನ್ಸ್ ಮಾಡ್ತಿದಾರೆ ಎಂದು ಕಿಡಿಕಾರಿದ್ದಾರೆ.
ಜನರಿಗೆ ಸ್ಪಂದಿಸದೇ ಏನು ಕಾರ್ಯಕ್ರಮ ಮಾಡ್ತಾರೇ?. ಹೇಳ್ಕೊಳ್ಳುವುದಕ್ಕೆ ಇವರ ಹತ್ರ ಏನು ಸಾಧನೆಗಳಿವೆ? ಶೇ 40ರಷ್ಟು ಕಮಿಷನ್ ಬಗ್ಗೆ ಹೇಳಿಕೊಳ್ಳಬೇಕಷ್ಟೇ. ಜನ ಸೇರಿಸ್ಕೊಂಡು ದುಡ್ಡು ಖರ್ಚು ಮಾಡ್ಕೊಂಡು ರಾಜಕೀಯ ಮಾಡ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಜನ ಸ್ಪಂದನ. ಜನ ಸ್ಪಂದನ ಅಂದ್ರೆ ಏನು? ಜನರ ಕಷ್ಟಕ್ಕೆ ಸ್ಪಂದಿಸುವುದು ಜನ ಸ್ಪಂದನ. ಬರೀ ಹೆಸರು ಮಾತ್ರ ಜನ ಸ್ಪಂದನ ಅಂದ್ರೆ ಆಗುತ್ತ ಎಂದರು.
ಬಿಜೆಪಿಯವರಿಗೆ ಜನರ ಬಗ್ಗೆ ಖಾಳಜಿ ಇಲ್ಲ ದುಡ್ಡು ಹೊಡೆಯೋದರಲ್ಲಿ ಮಾತ್ರ ಕಾಳಜಿ ಇದೆ. ಪಿಎಸ್ಐ ಹಗರಣದಲ್ಲಿ ಶಾಸಕ ಬಸವರಾಜ ದಡೇಸುಗೂರು ಹಣ ಪಡೆದ ಬಗ್ಗೆ ತಾವೇ ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿ ತನಿಖೆ ನಡೆಸಬೇಕು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಪ್ರಿಯಾಂಕ್ ಖರ್ಗೆ ಮಾತನಾಡಿದರೆ ನೋಟಿಸ್ ಕೊಡ್ತಾರೆ ಆದ್ರೆ ಅವರ ಶಾಸಕ ಸ್ವತ ಒಪ್ಪಿಕೊಂಡ್ರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿಯವರು ಪ್ರತಿಯೊಂದು ವಿಷಯದಲ್ಲೂ ಸೇಡಿನ ರಾಜಕೀಯ ಮಾಡ್ತಿದ್ದಾರೆ. ದಾವಣಗೆರೆಯಲ್ಲಿ ನಡೆದ ನನ್ನ ಜನ್ಮದಿನಾಚರಣೆ ಪ್ರತ್ಯುತ್ತರವಾಗಿ ಬಿಜೆಪಿ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಹೇಳಿದರು.










