ಗಾಂಧಿನಗರ : ಗುಜರಾತ್ ನ ವಡೋದರದಲ್ಲಿ ಮದುವೆಯಾಗಿ ಎಂಟು ವರ್ಷದ ಬಳಿಕ ಗಂಡನ ಸತ್ಯ ತಿಳಿದು ಮಹಿಳೆಯೊಬ್ಬರು ಶಾಕ್ ಆಗಿದ್ದಾರೆ.
2014ರಲ್ಲಿ 40 ವರ್ಷದ ಮಹಿಳೆಯೊಬ್ಬರು ಮದುವೆಯಾಗಿದ್ದ ವ್ಯಕ್ತಿಯು, ಪುರುಷನಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನ್ನು ಮುಚ್ಚಿಟ್ಟಿದ್ದು ಬಹಿರಂಗವಾಗಿದೆ. ಈ ಸಂಬಂಧ ಮಹಿಳೆ ಬುಧವಾರ ಗೋತ್ರಿ ಪೊಲೀಸ್ ನಲ್ಲಿ ದೂರು ದಾಖಲಿಸಿದ್ದು, ತನ್ನ ಪತಿ ವಿರಾಜ್ ವರ್ಧನ್ ವಂಚನೆ ಮತ್ತು ಅಸ್ವಾಭಾವಿಕ ಲೈಂಗಿಕತೆಗೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಎಫ್ಐಆರ್ನಲ್ಲಿ ಅವರ ಕುಟುಂಬಸ್ಥರ ಹೆಸರನ್ನು ಉಲ್ಲೇಖಿಸಿದ್ದಾರೆ.
ಸುಮಾರು ಒಂಬತ್ತು ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ ತಾಣವೊಂದರ ಮೂಲಕ ದಿಲ್ಲಿಯ ನಿವಾಸಿ ವಿರಾಜ್ ವರ್ಧನ್(ಈತನ ಮೂಲ ಹೆಸರು ವಿಜೈತಾ)ನನ್ನು ಭೇಟಿಯಾಗಿದ್ದೆ. ನನ್ನ ಮೊದಲ ಪತಿ 2011ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು ಮತ್ತು ನಮಗೆ 14 ವರ್ಷದ ಮಗಳಿದ್ದಳು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಫೆಬ್ರವರಿ 2014 ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವಿರಾಜ್ ವರ್ಧನ್ ನನ್ನು ಮಹಿಳೆ ಮದುವೆಯಾಗಿದ್ದು, ನಂತರ ಹನಿಮೂನ್ ಗಾಗಿ ಕಾಶ್ಮೀರಕ್ಕೆ ತೆರಳಿದ್ದರು. ಆದರೆ ಗಂಡ ಸಂಸಾರ ಮಾತ್ರ ಆರಂಭಿಸಿರಲಿಲ್ಲ. ದೈಹಿಕ ಸಂಪರ್ಕಕ್ಕೆ ಮುಂದಾಗದೆ ಅನೇಕ ದಿನಗಳ ಕಾಲ ನೆಪಗಳನ್ನು ಒಡ್ಡಿ ತಪ್ಪಿಸಿಕೊಳ್ಳುತ್ತಿದ್ದ. ಮಹಿಳೆ ಒತ್ತಾಯ ಮಾಡಿದಾಗ, ತಾನು ರಷ್ಯಾದಲ್ಲಿದ್ದಾಗ ಕೆಲವು ವರ್ಷಗಳ ಹಿಂದೆ ಅಪಘಾತಕ್ಕೆ ಒಳಗಾಗಿದ್ದಾಗಿ ಮತ್ತು ಆಗ ಲೈಂಗಿಕ ಸಾಮರ್ಥ್ಯ ಕಳೆದುಕೊಂಡಿದ್ದಾಗಿ ಹೇಳಿದ್ದ. ಜನವರಿ 2020ರಲ್ಲಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದಾಗಿ ತಿಳಿಸಿ ಕೋಲ್ಕತ್ತಾಗೆ ಹೋಗಿದ್ದರು. ಆದಾದ ಬಳಿಕ ಪುರುಷನಾಗಲು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ. ಆದರೆ ಶಸ್ತ್ರಚಿಕಿತ್ಸೆಯ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಅಲ್ಲದೇ ತನ್ನೊಂದಿಗೆ “ಅಸ್ವಾಭಾವಿಕ ಲೈಂಗಿಕತೆ” ನಡೆಸಲು ಪ್ರಾರಂಭಿಸಿದನು. ಈ ಬಗ್ಗೆ ಎಲ್ಲದರೂ ಹೇಳಿದರೆ ಭಯಾನಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಮತ್ತು ವಡೋದರಕ್ಕೆ ಕರೆದುಕೊಂಡು ಬರಲಾಗಿದೆ ಎಂದು ಗೋತ್ರಿ ಪೊಲೀಸ್ ಇನ್ಸ್ಪೆಕ್ಟರ್ ಎಂಕೆ ಗುರ್ಜರ್ ಹೇಳಿದ್ದಾರೆ.










