ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ವೈದ್ಯ – ವಿಡಿಯೋ ವೈರಲ್…

65
firstsuddi

ಜೈಪುರ : ರಾಜಸ್ಥಾನದ ಜೋಧ್ ಪುರದಲ್ಲಿ ವೈದ್ಯರೊಬ್ಬರು ಸರಪಳಿಯಲ್ಲಿ ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆ ಮೇಲೆ ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಸರ್ಕಾರಿ ಆಸ್ಪತ್ರೆ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.

ವೈರಲ್ ವಿಡಿಯೋದಲ್ಲಿ ವೈದ್ಯನೋರ್ವ ನಾಯಿಯ ಕತ್ತಿಗೆ ಸರಪಳಿ ಬಿಗಿದು ಕಾರಿಗೆ ಕಟ್ಟಿಕೊಂಡು ರಸ್ತೆ ಮೇಲೆ ಕ್ರೂರಿಯಂತೆ ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಬೈಕ್ ಸವಾರರೊಬ್ಬರು ಪ್ರಾಣಿ ಹಿಂಸೆ ಪಡುತ್ತಿರುವುದನ್ನು ಕಂಡು ತಕ್ಷಣ ಕಾರಿಗೆ ಅಡ್ಡಹಾಕಿದ್ದಾರೆ. ನಂತರ ನಾಯಿಯ ಕುತ್ತಿಗೆಗೆ ಕಟ್ಟಿದ್ದ ಚೈನ್ ಬಿಚ್ಚಿ, ಘಟನೆ ಬಗ್ಗೆ ನಗರದ ಡಾಗ್ ಹೋಮ್ ಫೌಂಡೇಶನ್‍ಗೆ ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಾಯಿಗೆ ಸ್ಥಳೀಯರು ಆಂಬ್ಯುಲೆನ್ಸ್ ವ್ಯವಸ್ಥೆಗೊಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆರೋಪಿಯನ್ನು ಡಾ. ರಜನೀಶ್ ಗಾಲ್ವಾ ಎಂದು ಗುರುತಿಸಲಾಗಿದೆ. ಡಾ.ರಜನೀಶ್ ಗಾಲ್ವಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 428 (ಪ್ರಾಣಿಗಳನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ಕಿಡಿಗೇಡಿತನ) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11 (ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶಾಸ್ತ್ರಿನಗರ ಎಸ್ ಎಚ್ ಒ ಜೋಗೇಂದ್ರ ಸಿಂಗ್ ಹೇಳಿದ್ದಾರೆ.