ಪೊಲೀಸ್ ಕ್ರಮದ ಹಿಂದೆ ಅಪರಾಧಗಳ ಹಿನ್ನೆಲೆ ಮಾತ್ರ ಪರಿಗಣನೆ, ಧರ್ಮ ಅಲ್ಲ : ಆರಗ ಜ್ಞಾನೇಂದ್ರ.

61
firstsuddi

ಬೆಂಗಳೂರು : ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಕೇವಲ ಅಪರಾಧಗಳ ಹಿನ್ನೆಲೆ ಮಾತ್ರ ಪರಿಗಣಿಸುತ್ತಾರೆಯೇ ವಿನಃ, ಅಲ್ಪಸಂಖ್ಯಾತ ಅಥವಾ ಬಹು ಸಂಖ್ಯಾತರು, ಜಾತಿ ಅಥವಾ ಧರ್ಮವನ್ನು ನೋಡಿ ಅಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ, ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಖಚಿತ ಮಾಹಿತಿ ಮೇರೆಗೆ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳ ಮೇಲೆ ಎನ್ಐಎ ಹಾಗೂ ಪೊಲೀಸರು ದಾಳಿ ನಡೆಸಿದ್ದಾರೆ. ಏಕತೆ, ಸಮಗ್ರತೆ ಹಾಳು ಮಾಡೋ, ಜೀವಹಾನಿ ಮಾಡುವ ಸಂಘಟನೆಗಳು ಹಲವು ಕೃತ್ಯಗಳ ಹಿಂದೆ ಇವೆ. ಆದ್ದರಿಂದ ಮಾಹಿತಿಯ ಮೇರೆಗೆ ರೇಡ್ ಆಗಿದೆ. ಸಂಘಟನೆಯ ಕೆಲ ಮುಖಂಡರನ್ನು ಈಗ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗ ಪೊಲೀಸರು ಇಬ್ಬರು ವ್ಯಕ್ತಿಗಳು, ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ತನಿಖೆಯನ್ನು ಚುರುಕಿನಿಂದ ನಡೆಸಿರುವ ಪೊಲೀಸರ ಕಾರ್ಯಕ್ಷಮತೆಗೆ ಅಭಿನಂದಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪೇ ಸಿಎಂ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಜನರು ಪಕ್ಷದಿಂದ ದೂರವಾಗುತ್ತಿದ್ದು, ಇದರಿಂದ ಹತಾಶರಾದ ಕಾಂಗ್ರೆಸ್ ನಾಯಕರು, ಇಂಥಹ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದರು.