ಪಾಟ್ನಾ: ವಿದ್ಯಾರ್ಥಿನಿಯೊಬ್ಬಳು ಸರ್ಕಾರ ಸ್ಯಾನಿಟರಿ ಪ್ಯಾಡ್ ನೀಡಬಹುದಾ ಎಂದು ಕೇಳಿದ ಪ್ರಶ್ನೆಗೆ ಮಹಿಳಾ ಐಎಎಸ್ ಅಧಿಕಾರಿ ಖಾರವಾಗಿ ಉತ್ತರಿಸಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಮಹಿಳಾ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳು, ಸರ್ಕಾರ 20-30 ರೂ.ಗೆ ಸ್ಯಾನಿಟರಿ ಪ್ಯಾಡ್ ಗಳನ್ನು ನೀಡಬಹುದಾ ಎಂದು ಸರಳವಾಗಿ ಪ್ರಶ್ನಿಸಿದ್ದಾಳೆ. ಈ ವೇಳೆ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ನೀಡಿದ ಉತ್ತರದಿಂದ ಎಲ್ಲರೂ ದಂಗಾಗಿದ್ದಾರೆ.
ಇಂದು ನೀವು ಸ್ಯಾನಿಟರಿ ಪ್ಯಾಡ್ ಕೇಳುತ್ತಿದ್ದೀರಿ, ನಾಳೆ ನೀವು ಜೀನ್ಸ್ ಮತ್ತು ನಂತರ ಸುಂದರವಾದ ಬೂಟುಗಳನ್ನು ಕೇಳುತ್ತೀರಿ. ಕೊನೆಗೆ ಸರ್ಕಾರ ನಿಮಗೆ ಕುಟುಂಬ ಯೋಜನೆ ವಿಧಾನ, ಕಾಂಡೋಮ್ಗಳನ್ನೂ ಕೂಡಾ ನೀಡುತ್ತದೆ ಎಂಬುದನ್ನು ನೀವು ನಿರೀಕ್ಷಿಸುತ್ತೀರಿ ಅಲ್ವಾ? ಎಂದು ಕೇಳಿದ್ದಾರೆ.
ಅಧಿಕಾರಿಯ ಈ ಮಾತಿಗೆ ತಕ್ಷಣ ವಿದ್ಯಾರ್ಥಿನಿ ಜನರ ಮತಗಳಿಂದಲೇ ಸರ್ಕಾರ ರಚನೆ ಮಾಡುತ್ತವೆ ಎಂದಿದ್ದಾಳೆ. ಇದಕ್ಕೆ ಮತ್ತೆ ತಿರುಗೇಟು ನೀಡಿದ ಅಧಿಕಾರಿ ಇದು ಮೂರ್ಖತನದ ಪರಮಾವಧಿ. ನಿಮಗೆ ಮತ ಹಾಕಲು ಆಗಲ್ಲ ಅಂದ್ರೆ ಹಾಕಬೇಡಿ. ಬೇಕೆಂದರೆ ಪಾಕಿಸ್ತಾನಿಗಳಾಗಿ. ಹಣ ಹಾಗೂ ಸೇವೆಗೋಸ್ಕರ ನೀವು ಮತ ಹಾಕುತ್ತೀರಾ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಉತ್ತರಿಸಿದ ವಿದ್ಯಾರ್ಥಿನಿ, ನಾನು ಭಾರತೀಯಳು. ನಾನೇಕೆ ಪಾಕಿಸ್ತಾನಿಯಾಗಬೇಕು? ಎಂದು ಪ್ರಶ್ನಿಸಿದ್ದಾಳೆ. ಐಎಎಸ್ ಅಧಿಕಾರಿ ಅವರ ಈ ಮಾತು ಈಗ ವಿವಾದಕ್ಕೆ ಈಡಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.










