ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ (ಬಿಪಿಎಸ್) ಹೆಚ್ಚಿಸಿದೆ. ಈ ನಿರ್ಧಾರದಿಂದ ರೆಪೋ ದರ ಶೇ 5.4 ರಿಂದ 5.9ಕ್ಕೆ ಏರಿಕೆಯಾದಂತಾಗಿದೆ.
ರೆಪೋ ದರ ಸತತ ನಾಲ್ಕನೇ ಬಾರಿಗೆ ಏರಿಕೆಯಾಗಿದೆ. ಆರ್ ಬಿಐ ಮೇ ತಿಂಗಳಿನಿಂದ ಈವರೆಗೆ 190 ಬೇಸಿಸ್ ಪಾಯಿಂಟ್ ಗಳಷ್ಟು ದರಗಳನ್ನು ಹೆಚ್ಚಿಸಿದೆ. ರೆಪೋ ದರ ಏರಿಕೆಯಾದ ಕಾರಣ ಗೃಹ, ವಾಹನ ಸಾಲದ ಬಡ್ಡಿ ದರ ಏರಿಕೆಯಾಗಲಿದೆ.
ಹಣದುಬ್ಬರವನ್ನು ಸಹನೀಯ ಮಟ್ಟಕ್ಕೆ ತರಲು ಮತ್ತು ಪ್ರಮುಖ ಜಾಗತಿಕ ಕೇಂದ್ರ ಬ್ಯಾಂಕ್ ಗಳ ನೀತಿ ಬಿಗಿಗೊಳಿಸುವಿಕೆಗೆ ಅನುಗುಣವಾಗಿ ಆರ್ ಬಿಐ ಈ ಕ್ರಮ ತೆಗೆದುಕೊಂಡಿದೆ.
ರೆಪೋ ದರ ಎಂದರೇನು? : ರೆಪೋ ದರ ಬ್ಯಾಂಕ್ ಗೆ ಆರ್ ಬಿಐ ಸಾಲ ನೀಡುವ ದರವಾಗಿದೆ. ಇದರ ಆಧಾರದ ಮೇಲೆ ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡುತ್ತವೆ. ಆರ್ಬಿಐ ರೆಪೊ ದರ ಹೆಚ್ಚಿಸಿದಾಗ, ಬ್ಯಾಂಕ್ ಗಳ ಮೇಲಿನ ಹೊರೆಯೂ ಹೆಚ್ಚಾಗುತ್ತದೆ. ಇದರ ಪರಿಣಾಮ ಬಡ್ಡಿ ದರ ಏರಿಕೆಯ ಮೂಲಕ ಬ್ಯಾಂಕ್ ಗ್ರಾಹಕರ ಮೇಲೆ ಬೀಳುತ್ತದೆ.










