ಮಕ್ಕಳಿಗೆ ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳನ್ನ ಕಲಿಸಿ : ರಂಗನಾಥಸ್ವಾಮಿ.

97
firstsuddi

ಚಿಕ್ಕಮಗಳೂರು : ಶಿಕ್ಷಕರು ಮಕ್ಕಳಿಗೆ ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳನ್ನೂ ಕಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗನಾಥಸ್ವಾಮಿ ಸಲಹೆ ನೀಡಿದರು.

ನಗರದ ಮಲೆನಾಡು ವಿದ್ಯಾ ಸಂಸ್ಥೆಯ ಪಿ.ಎಂ.ಎಲ್.ವಿ ಪ್ರೌಢಶಾಲೆಯಲ್ಲಿ ನಿನ್ನೆ ವಿದ್ಯಾರ್ಥಿ ಸಂಘ ಮತ್ತು ವಿಜ್ಞಾನ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚುತ್ತಿದೆ ಆದರೆ ಶಿಕ್ಷಣವಂತರಲ್ಲಿ ಮಾನವೀಯ ಮೌಲ್ಯಗಳ ಕೊರತೆಯಿರುವುದರಿಂದಾಗಿ ಸಮಾಜದಲ್ಲಿ ಅಪರಾಧಗಳ ಸಂಖ್ಯೆಯೂ ಏರುತ್ತಿದೆ ಎಂದು ವಿಷಾದಿಸಿದರು.

ಶಿಕ್ಷಕರು ಮತ್ತು ಪೋಷಕರು ಮಕ್ಕಳಲ್ಲಿ ಪಠ್ಯದ ಜೊತೆಗೆ ಸಂಸ್ಕೃತಿ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನೂ ಬೆಳೆಸಿದರೆ ಆರೋಗ್ಯವಂತ ಸಮಾಜದ ನಿರ್ಮಾಣವಾಗುತ್ತದೆ ಎಂದರು.

ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯಕುಮಾರ್ ಮಾತನಾಡಿ ಯುವಜನತೆ ಕಲಿತ ವಿದ್ಯೆ ಮತ್ತು ವಿಜ್ಞಾನವನ್ನು ದೇಶಕಟ್ಟಲು ಬಳಸಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ವಿದ್ಯಾರ್ಥಿಗಳು ಸನ್ನಡತೆಯನ್ನು ರೂಢಿಸಿಕೊಳ್ಳಬೇಕು, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ವಿದ್ಯಾರ್ಥಿ ಸಂಘ ಮತ್ತು ವಿಜ್ಞಾನ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾಲೇಜಿನ ಸಹಕಾರ್ಯದರ್ಶಿ ಎಸ್.ಶಂಕರನಾರಾಯಣ ಭಟ್, ಉಪಾಧ್ಯಕ್ಷೆ ಎಸ್.ಎಲ್.ರಾಧಾ ಸುಂದರೇಶ್, ನಿರ್ದೇಶಕ ಎಂ.ವಿ.ಷಡಕ್ಷರಿ, ಕಛೇರಿ ವ್ಯವಸ್ಥಾಪಕಿ ಟಿ.ಕೆ.ಶ್ರೀಲಕ್ಷ್ಮೀ, ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಮುಖ್ಯಶಿಕ್ಷಕ ಬಿ.ಎಂ.ಲೋಕೇಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಹರ್ಷಿತ ಕಾರ್ಯಕ್ರಮವನ್ನು ನಿರೂಪಿಸಿದರು, ಮೆಹೆಕ್ ಸ್ವಾಗತಿಸಿದರು, ಸಿ.ಸಿಂಚನ ವಂದಿಸಿದರು.