ಸಿ.ಪಿ.ಯೋಗೇಶ್ವರ್ ಕಾರಿನ ಮೇಲೆ ಕಲ್ಲು ತೂರಾಟ ; ಸಿಎಂ ಬೊಮ್ಮಾಯಿ ಖಂಡನೆ…

63
firstsuddi

ಬೆಂಗಳೂರು: ರಾಮನಗರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆದಿರುವುದನ್ನು ಸಿಎಂ ಬೊಮ್ಮಾಯಿ ಅವರು ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ರಾಮನಗರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗಿಶ್ವರ್ ಅವರ ಮೇಲೆ ಕಲ್ಲು ಹಾಗೂ ಮೊಟ್ಟೆ ಎಸೆದಿರುವುದು ಸರಿಯಲ್ಲ. ಈ ದಾಳಿಯನ್ನು ನಾನು ಕಟುವಾಗಿ ಖಂಡಿಸುತ್ತೇನೆ. ವಿಷಯಗಳು ಏನೇ ಇರಲಿ ಅದನ್ನು ಕಾನೂನಾತ್ಮಕವಾಗಿ ಬಗೆಹರೆಸಿಕೊಳ್ಳಬೇಕು ಮತ್ತು ಯಾರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಎಂದು ತಿಳಿಸಿದ್ದಾರೆ.

ಇತ್ತ ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಅವರು ಕೂಡ ಟ್ವೀಟ್ ಮೂಲಕ ಕಿಡಿಕಾರಿದ್ದು, ನಮ್ಮ ರಾಮನಗರ ಜಿಲ್ಲೆಯಲ್ಲಿ ನಮ್ಮ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ತಡೆಯಲು ಹೆಚ್ ಡಿಕೆ ಅವರು ‘ವಾಮ ಮಾರ್ಗ’ ಅನುಸರಿಸುತ್ತಿರುವುದು ಖಂಡನೀಯ. ‘ಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು’ ಎಂಬ ಸಿದ್ಧಾಂತಕ್ಕೆ ಕಟ್ಟುಬೀಳುವ ಬದಲು ನಾವು ಮಾಡುತ್ತಿರುವ ಜನಪರ ಕಾರ್ಯಗಳನ್ನು ಬೆಂಬಲಿಸಿ ಎಂದು ಟೀಕಿಸಿದ್ದಾರೆ.

ಕುಮಾರಸ್ವಾಮಿ ಅವರೇ, ಅಧಿಕಾರ ಬರುತ್ತದೆ, ಹೋಗುತ್ತದೆ. ಇದ್ದಷ್ಟು ದಿನ ಎಷ್ಟು ಜನಪರ ಕೆಲಸ ಮಾಡಿದ್ದೇವೆ ಎಂಬುದಷ್ಟೇ ಶಾಶ್ವತವಾಗಿ ಉಳಿಯುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತಿವೆ ಎಂಬುದು ನಿಮಗೂ ತಿಳಿದಿದೆ. ಆತ್ಮ ಸಾಕ್ಷಿಗೆ ವಿರುದ್ಧವಾದ ದ್ವೇಷದ ರಾಜಕಾರಣ ಬೇಡ ಎಂದಿದ್ದಾರೆ.