ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಸಂಘರ್ಷದ ನಡುವೆ ನಿನ್ನೆ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ ಪ್ರಧಾನಿ ಮೋದಿ, ಶಾಂತಿ ಮಾತುಕತೆ ನಡೆಸಿ ಯುದ್ಧಕ್ಕೆ ಅಂತ್ಯ ಹಾಡುವಂತೆ ಸಲಹೆ ನೀಡಿದ್ದರು.
ಎರಡು ದೇಶಗಳ ನಡುವೆ ಶಾಂತಿಯ ಸ್ಥಾಪನೆಗಾಗಿ ಕೊಡುಗೆ ನೀಡಲು ಭಾರತವು ಸಿದ್ಧವಾಗಿದೆ. ಯುದ್ಧವನ್ನು ನಿಲ್ಲಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸುವ ಅಗತ್ಯವಿದೆ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ ಮಾತುಕತೆ ಕರೆಗೆ ಪ್ರತಿಕ್ರಿಯಿಸಿದ ಝೆಲೆನ್ಸ್ಕಿ, ಯುದ್ಧ ಪ್ರಾರಂಭಿಸಿದವರು ರಷ್ಯಾದವರು. ಯುದ್ಧ ಪ್ರಾರಂಭಿಸಿರುವ ಅವರೇ ಯುದ್ಧವನ್ನು ನಿಲ್ಲಿಸಲಿ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್ ರಷ್ಯಾದ ಒಕ್ಕೂಟದ ಪ್ರಸ್ತುತ ಅಧ್ಯಕ್ಷರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ.
ಉಕ್ರೇನ್ ಯಾವಾಗಲೂ ಸಂವಾದದ ಮೂಲಕ ಶಾಂತಿಯುತ ಇತ್ಯರ್ಥಕ್ಕೆ ಬದ್ಧವಾಗಿದೆ. ಇದಲ್ಲದೆ ಯುಎನ್ ಜನರಲ್ ಅಸೆಂಬ್ಲಿಯ ಅಧಿವೇಶನದಲ್ಲಿ ನನ್ನ ಭಾಷಣದ ಸಮಯದಲ್ಲಿ ಶಾಂತಿಗಾಗಿ ನಮ್ಮ ಸ್ಪಷ್ಟ ಸೂತ್ರವನ್ನು ವಿವರಿಸಿದೆ. ಅದನ್ನು ಸಾಧಿಸಲು ನಮ್ಮ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ರಷ್ಯಾ ಯಾವುದೇ ಮಾತುಕತೆಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಭಾರತದ ಬೆಂಬಲಕ್ಕಾಗಿ ಝೆಲೆನ್ಸ್ಕಿ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿದರು.










